ADVERTISEMENT

ಕೊಡಗು | ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ವೀರಭದ್ರ ಸ್ವಾಮಿ ವರ್ಧಂತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:52 IST
Last Updated 13 ಸೆಪ್ಟೆಂಬರ್ 2025, 5:52 IST
   

ಸೋಮವಾರಪೇಟೆ: ತಾಲ್ಲೂಕಿನ ತಪೋಕ್ಷೇತ್ರ ಮನೆಹಳ್ಳಿ ಮಠ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ವತಿಯಿಂದ ಮಠದ ಆವರಣದಲ್ಲಿ ಈಚೆಗೆ ವೀರಭದ್ರ ಸ್ವಾಮಿ ವರ್ಧಂತಿ ಮಹೋತ್ಸವದ ಅಂಗವಾಗಿ ನಡೆದ ಲಕ್ಷ ಬಿಲ್ವ ಹಾಗೂ ಪುಷ್ಪಾರ್ಚನೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ತಪೋಕ್ಷೇತ್ರ ಮನೆಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮೀಜಿ ಮಾತನಾಡಿ, ದುಷ್ಟರ ಸಂಹಾರಕ್ಕಾಗಿ ಅವತರಿಸಿದ ವೀರಭದ್ರ ಸ್ವಾಮಿಯಿಂದ ಲೋಕ ಕಲ್ಯಾಣವಾಯಿತು. ವರ್ಷದ ಮೊದಲ ಹಬ್ಬವಾದ ಗೌರಿ, ಗಣೇಶ ಚತುರ್ಥಿಗೂ ಮುನ್ನ ಶ್ರಾವಣ ಮಾಸದ ಬಳಿಕ ಬರುವ ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿ ಅವತರಿಸಿದರೆಂದು ಪ್ರತೀತಿ ಇದೆ. ತನ್ನ ಸತಿಗೆ ಆದ ನೋವಿಗೆ ಪ್ರತೀಕಾರವಾಗಿ ಶಿವನು ವೀರಭದ್ರ ಅವತರಿಸಲು ಕಾರಣೀಕರ್ತನಾದನು. ಉಗ್ರ ಸ್ವರೂಪಿಯಾದ ವೀರಭದ್ರನು ಅಂದಿನಿಂದ ಶಿಷ್ಟರ ರಕ್ಷಣೆ ಮಾಡುತ್ತಿದ್ದಾರೆ. 7 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯೊಂದಿಗೆ ಕ್ಷೇತ್ರದಲ್ಲಿ ಸ್ವಾಮಿಯ ವರ್ಧಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಲಕ್ಷ ಬಿಲ್ವಾರ್ಚನೆ, ಪುಷ್ಪಾರ್ಚನೆ ನಡೆಸಿದ್ದೇವೆ ಎಂದರು.

ಅರ್ಚಕರಾದ ಹಿರೇಮಠ, ಮಲ್ಲೇಶ ಐನೂರು ಹಾಗೂ ಚಿಕ್ಕ ವೀರೇಶ್ ಅವರು ತಪೋಕ್ಷೇತ್ರದ ವೀರಭದ್ರ ಸ್ವಾಮಿ, ಗುರುಸಿದ್ಧವೀರೇಶ್ವರ ಸ್ವಾಮಿ, ದೇವಿ ತಪೋವನೇಶ್ವರಿ, ಗಣಪತಿ ದೇವರಿಗೆ ವಿಶೇಷ ಪೂಜೆ, ಅರ್ಚನೆ ನಂತರ ಮಹಾಮಂಗಳಾರತಿ ನಡೆಸಿದರು. ರಾತ್ರಿ ಮಂಗಳ ವಾದ್ಯಗೋಷ್ಠಿಗಳೊಂದಿಗೆ ದೇವರ ಉತ್ಸವ ನಡೆಯಿತು.

ADVERTISEMENT

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲು ಮಠದ ಮಹಾಂತ ಸ್ವಾಮಿಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಚಿಲುಮೆ ಮಠದ ಜಯಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.