ADVERTISEMENT

ವಿದ್ಯುತ್‌ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು, ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:18 IST
Last Updated 7 ಮೇ 2021, 4:18 IST
ಚಂದ್ರಶೇಖರ್
ಚಂದ್ರಶೇಖರ್   

ಕುಶಾಲನಗರ: ಉತ್ತರ ಕೊಡಗಿನ‌ ಗಡಿ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ಕೃಷಿಕರು ಹಾಗೂ ಸಾರ್ವಜನಿಕರಿಗೆ ತುಂಬ ತೊಂದರೆ ಉಂಟಾಗುತ್ತಿದ್ದು, ಈ ಭಾಗಕ್ಕೆ ಪ್ರತ್ಯೇಕವಾದ ಪವರ್ ಸ್ಟೇಷನ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತೊರೆನೂರು, ಶಿರಂಗಾಲ, ಕೂಡಿಗೆ, ಹೆಬ್ಬಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಕಾರಣ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರು, ಕೃಷಿಕರಿಂದ
ಕೇಳಿಬರುತ್ತಿವೆ.

ಕುಶಾಲನಗರ ಸೆಸ್ಕ್ ಮೂಲಕ ಈ ಭಾಗಗಳಿಗೆ ವಿದ್ಯುತ್ ಸರಬರಾಜು ಆಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಮಳೆ ಅಥವಾ ಗಾಳಿ ಬಂದರೂ ವಿದ್ಯುತ್ ಕಡಿತ ಉಂಟಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಒಂದು ಬಾರಿ ವಿದ್ಯುತ್ ಕಡಿತಗೊಂಡರೆ 24 ಗಂಟೆ ಕಳೆದರೂ ಮರಳಿ ಬರುವುದಿಲ್ಲ ಎಂದು ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ದೂರಿದ್ದಾರೆ.

ADVERTISEMENT

ಪ್ರತ್ಯೇಕ ಪವರ್‌ ಸ್ಟೇಷನ್ ಸ್ಥಾಪಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಸದಸ್ಯ ಜಯಣ್ಣ, ಗ್ರಾಮಸ್ಥರಾದ ಎಸ್.ಎ.ಶ್ರೀನಿವಾಸ್, ಎಚ್.ಎಸ್.ಬಸವರಾಜು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರಮುಖರು ಆಗ್ರಹಿಸಿದ್ದಾರೆ.

‘ಪ್ರತ್ಯೇಕ ಪವರ್ ಸ್ಟೇಷನ್ ನಿರ್ಮಿಸಲು ಜಾಗದ ಕೊರತೆಯಿದೆ. ಕೂಡಿಗೆ, ಹೆಬ್ಬಾಲೆ ಸುತ್ತಮುತ್ತ 2 ಎಕರೆಯಷ್ಟು ಸ್ಥಳ ದೊರೆತಲ್ಲಿ ನಿಗಮದ ವತಿಯಿಂದ ಪವರ್ ಸ್ಟೇಷನ್ ನಿರ್ಮಿಸಲು ಸಾಧ್ಯ’ ಎಂದು ಸೆಸ್ಕ್ ಎಇಇ ಅಶೋಕ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.