ಸೋಮವಾರಪೇಟೆ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಕೊಡಗಿನ ಇಬ್ಬರು ಶಾಸಕರುಗಳ ಹೆಸರಗಳಿಗೆ ತಳಕುಹಾಕುವ ಮೂಲಕ ರಾಜಕೀಯ ಲಾಭಕ್ಕೆ ಬಿಜೆಪಿ ಹವಣಿಸುತ್ತಿದ್ದು, ಘಟನೆಯ ಸತ್ಯಾಸತ್ಯತೆ ಜನರಿಗೆ ತಿಳಿದಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಲ್ಲೂಕಿನ ಯಡೂಂಡೆ ಗ್ರಾಮದ ಯುವಕ ವಿನಯ್ ಜೀವ ಕಳೆದುಕೊಂಡಿರುವುದು ನಮಗೂ ನೋವು ತಂದಿದೆ. ಆದರೆ, ಬಿಜೆಪಿ ಹೆಣವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ. ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರದ ಇಬ್ಬರು ಶಾಸಕರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮೇಲೆ, ಮುಂದಾಗುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇರಬೇಕು. ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಿಲ್ಲ. ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡರೆ ಬಿಜೆಪಿಗೆ ಒಂದಷ್ಟು ಲಾಭವಾಗಬಹುದು. ಸತ್ತವರ ಕುಟುಂಬ, ಹೆಂಡತಿ, ಮಕ್ಕಳ ಭವಿಷ್ಯವನ್ನು ರೂಪಿಸಿವುದಕ್ಕೆ ಯಾವ ಪಕ್ಷವೂ ಬರುವುದಿಲ್ಲ. ಯುವಕರು ಎಚ್ಚೆತ್ತುಕೊಳ್ಳುವ ಮೂಲಕ ತಮ್ಮ ಸ್ವಂತಿಕೆಯನ್ನು ರಾಜಕೀಯ ಪಕ್ಷಗಳಿಗೆ ಮಾರಿಕೊಳ್ಳಬಾರದು. ವಿದ್ಯಾವಂತರೆನಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ತೇಜೋವಧೆ ಮಾಡಬಾರದು. ಕಾನೂನು ಬಲಿಷ್ಠವಾಗಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ಸಂಸದರಾಗಿದ್ದ ಸಂದರ್ಭದಲ್ಲಿ ಕೊಡಗಿಗೆ ಬರದ ಪ್ರತಾಪ ಸಿಂಹ, ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಮೇಲೆ ರಾತ್ರೋರಾತ್ರಿ ಬಂದು ಕೂಗಾಡಿ ಹೋಗಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಗೆದ್ದ ವ್ಯಕ್ತಿಗೆ ಕಳೆದ ಸಾಲಿನಲ್ಲಿ ಟಿಕೆಟ್ ಸಿಕ್ಕಿಲ್ಲ. ಜಿಲ್ಲೆಯ ಶಾಸಕರುಗಳನ್ನು ಟೀಕಿಸಿದರೆ ಮುಂದೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದರು.
ಇಲ್ಲಸಲ್ಲದ ವಿಷಯಗಳಿಗೆ ಪ್ರತಿನಿತ್ಯ ಪ್ರತಿಭಟನೆ ಮಾಡುತ್ತ, ಸಾರ್ವಜನಿಕಕರಿಗೆ ತೊಂದರೆ ನೀಡಿ, ಸರ್ಕಾರಿ ಅಧಿಕಾರಿಗಳ ಸಮಯವನ್ನು ಹಾಳು ಮಾಡುತ್ತಿರುವ ಬಿಜೆಪಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿ, ಕಾರ್ಯಕರ್ತರ ಪುಂಡಾಟವನ್ನು ಹತ್ತಿಕ್ಕಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಎಂ. ಚಂಗಪ್ಪ, ಕೆ.ಎ. ಆದಂ, ಎಚ್.ಆರ್. ಸುರೇಶ್, ಶೀಲಾ ಡಿಸೋಜ, ಜಿ.ಎಂ. ಕಾಂತರಾಜ್, ಕಿರಣ್ ಉದಯಶಂಕರ್, ಚೇತನ್ ಇದ್ದರು.
ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರಿಸ್ಥಿತಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೂ ಬರಲಿದೆ. ಕೆಲವೇ ದಿನಗಳಲ್ಲಿ ಪ್ರತಾಪ್ ಸಿಂಹನನ್ನು ಬಿಜೆಪಿ ಉಚ್ಚಾಟಿಸಲಿದೆ. ವಿನಯ್ ಆತ್ಮಹತ್ಯೆಯ ವಿಷಯದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿ ಶಾಸಕ ಡಾ.ಮಂತರ್ಗೌಡ ಅವರನ್ನು ಪ್ರತಾತ ಸಿಂಹ ನಿಂದಿಸುತ್ತಿದ್ದಾರೆ. ಕಳೆದ 10 ವರ್ಷ ಸಂಸದರಾಗಿದ್ದ ಸಂದರ್ಭ ಕೊಡಗಿಗೆ ಅವರ ಕೊಡುಗೆ ಶೂನ್ಯ. ಕೊಡಗಿಗೆ ರೈಲು ತರುತ್ತೇನೆ ಎಂದು ರೈಲು ಬಿಟ್ಟಿದ್ದು ಬಿಟ್ಟರೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಈಗಿನ ಇಬ್ಬರೂ ಶಾಸಕರು ಕೋಟಿಗಟ್ಟಲೆ ಅನುದಾನ ತಂದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಬಿಜೆಪಿಯ ಮಾಜಿಗಳಿಗೆ ಈಗ ನಡುಕ ಪ್ರಾರಂಭವಾಗಿದ್ದು ಕಾರ್ಯಕರ್ತರ ಸಾವನ್ನು ರಾಜಕೀಯಕ್ಕೆ ಎಳೆದುತರುತ್ತಿದ್ದಾರೆ ಎಂದು ಕೆ.ಎಂ.ಲೋಕೇಶ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.