ADVERTISEMENT

ವಿರಾಜಪೇಟೆ | ಕುಟುಂಬದ ಉಳಿವಿಗೆ ಸಂಸ್ಕೃತಿ ಉಳಿಯಬೇಕು–ಪಿ.ಎಸ್. ಪ್ರಕಾಶ್

ಅಮ್ಮತ್ತಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಿ.ಎಸ್. ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:17 IST
Last Updated 28 ಜನವರಿ 2026, 7:17 IST
ವಿರಾಜಪೇಟೆ ಸಮೀಪದ ಅಮ್ಮತ್ತಿಯಲ್ಲಿ ಸೋಮವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕದ ದಕ್ಷಿಣ ಕರ್ನಾಟಕ ಪ್ರಾಂತ ಸಹ ಕಾರ್ಯವಾಹಕ ಪಿ.ಎಸ್. ಪ್ರಕಾಶ್ ಮಾತನಾಡಿದರು
ವಿರಾಜಪೇಟೆ ಸಮೀಪದ ಅಮ್ಮತ್ತಿಯಲ್ಲಿ ಸೋಮವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕದ ದಕ್ಷಿಣ ಕರ್ನಾಟಕ ಪ್ರಾಂತ ಸಹ ಕಾರ್ಯವಾಹಕ ಪಿ.ಎಸ್. ಪ್ರಕಾಶ್ ಮಾತನಾಡಿದರು   

ವಿರಾಜಪೇಟೆ: ಇಡೀ ವಿಶ್ವಕ್ಕೆ ಅಧ್ಯಾತ್ಮ ನೀಡಿರುವ ಭಾರತ ಹಾಗೂ ಕುಟುಂಬ ಉಳಿಯಬೇಕಾದರೆ ಸಂಸ್ಕೃತಿ ಉಳಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕದ ದಕ್ಷಿಣ ಕರ್ನಾಟಕ ಪ್ರಾಂತ ಸಹ ಕಾರ್ಯವಾಹಕ ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.

ಸಮೀಪದ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಸೋಮವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂಗಳು ಜಾತಿ, ಬೇಧ ಮರೆತು ಸಂಘಟಿತರಾಗಿ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಮೇಲು-ಕೀಳು ಎನ್ನುವ ಅಹಂಕಾರ ಬಿಟ್ಟು ಎಲ್ಲರನ್ನೂ ನಮ್ಮವರು ಎನ್ನುವ ಭಾವ ನಮ್ಮಲ್ಲಿ ಮೂಡಬೇಕು. ಇಂದು ಸಮಾಜದಲ್ಲಿ ಪಂಚ ಪರಿವರ್ತನೆಗಳ ಅಗತ್ಯವಿದ್ದು, ಸಾಮಾಜಿಕ ಮೌಲ್ಯಗಳ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಪರಿಸರದ ಸಂರಕ್ಷಣೆ ಸ್ವದೇಶಿ ಭಾವಗಳ ಜಾಗೃತಿ ಹಾಗೂ ನಾಗರಿಕ ಶಿಸ್ತು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ಹಿಂದೂ ಸಮಾಜ ಆಂತರಿಕ ಹಾಗೂ ಬಾಹ್ಯವಾಗಿ ಆತಂಕ ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳಬೇಕು. ಧರ್ಮ ಹಾಗೂ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಮೂರು ಅಕ್ಷರಗಳಲ್ಲಿಯೇ ಸಮರ್ಥ ಸತ್ವ ಹೊಂದಿರುವ ಸದೃಢ ದೇಶ ಭಾರತ’ ಎಂದು ಹೇಳಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಮಾತನಾಡಿ, ‘ಜನಸಾಮಾನ್ಯರು ಹಿಂದುತ್ವದ ಬಗ್ಗೆ ಜಾಗೃತಿ ಹಾಗೂ ದೇಶ ಭಕ್ತಿ ಹೊಂದಬೇಕು. ಹಿಂದೂ ಸಮಾಜದ ಸಂಘಟನೆ, ಸ್ವಾವಲಂಬಿ, ಸಂಸ್ಕಾರ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಾವು ನಿರತರಾಗಬೇಕು. ಹಿಂದೂಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು’ ಎಂದರು.

‘ಜಿಲ್ಲೆಯಲ್ಲಿ ಅಸ್ಸಾಂನವರು ಎಂದು ಹೇಳಿ ಬಾಂಗ್ಲಾ ದೇಶದವರು ಸೇರಿಕೊಂಡಿದ್ದಾರೆ. ಅವರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಎಲ್ಲ ದಾಖಲಾತಿಗಳನ್ನು ನಮ್ಮವರೇ ಕೆಲವರು ಮಾಡಿಕೊಡುತ್ತಿರುವುದು ಕಳವಳಕಾರಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಕೆ. ಶ್ರೀನಿವಾಸ್ ಮಾತನಾಡಿ, ‘ಕೆಲವರು ಹಿಂದೂ ಅಂತ ಹೇಳೋಕೆ ಹಿಂದೆ ಸರಿಯುತ್ತಾರೆ. ಹಿಂದೂ ಎಂದು ಹೇಳಲು ಅವರಿಗೆ ಭಯ ಯಾಕೆ. ಪ್ರತಿಯೊಬ್ಬರೂ ನಮ್ಮ ಧರ್ಮಗ್ರಂಥ ಭಗವದ್ಗೀತೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು’ ಎಂದರು.

ಹಿಂದೂ ಸಂಗಮದ ಅಂಗವಾಗಿ ಅಮ್ಮತ್ತಿ ಪಟ್ಟಣದಲ್ಲಿ ವೈಭವದ ಮೆರವಣಿಗೆ ನಡೆಯಿತು. ಮೆರವಣಿಗೆ ಅಮ್ಮತ್ತಿಯ ಪ್ರಮುಖ ರಸ್ತೆಯುದ್ದಕ್ಕೂ ಸಂಚರಿಸಿ ಕೊಡವ ಸಮಾಜದವರೆಗೂ ಸಾಗಿ ಬಂತು. ಸ್ವಾಗತ ನೃತ್ಯ, ಚಂಡೆ ವಾದ್ಯ, ದುಡಿಕೊಟ್ಟ್ ಪಾಟ್, ಕೊಡವ ವಾಲಗ, ಚೀನಿ ದುಡಿ, ಬೊಳಕಾಟ್, ಭಜನಾ ನೃತ್ಯ ಪ್ರದರ್ಶಿಸಲಾಯಿತು.

ಅಯ್ಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಕುಟ್ಟಂಡ ಸಂಜು, ಕಾವಾಡಿ ಭಗವತಿ ದೇವಸ್ಥಾನದ ಅಧ್ಯಕ್ಷ ಮುಕ್ಕಾಟಿರ ನಾಚಪ್ಪ, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಕೆ. ರವಿ ಉಪಸ್ಥಿತರಿದ್ದರು.

ಸುವಿನ್ ಗಣಪತಿ, ಕುಟ್ಟಂಡ ಪ್ರಿನ್ಸ್ ಗಣಪತಿ, ಚಂದ್ರನ್, ವಿಶಾಲಾಕ್ಷಿ, ಎಂ.ಡಿ. ಚಿಣ್ಣಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಸಮುದಾಯವರು ಭಾಗವಹಿಸಿದ್ದರು.
 ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಅಮ್ಮತ್ತಿಯಲ್ಲಿ ವೈಭವದ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.