
ವಿರಾಜಪೇಟೆ: ಸಮೀಪದ ಪೆರುಂಬಾಡಿ ಗ್ರಾಮದ ಯೂತ್ ಫ್ರೆಂಡ್ಸ್ ಸಂಘದ ವತಿಯಿಂದ ಈಚೆಗೆ ನಡೆದ 5 ನೇ ವರ್ಷದ ಹೊನಲು ಬೆಳಕಿನ ಪ್ರೋ ಮ್ಯಾಟ್ ಕಬಡ್ಡಿ ಲೀಗ್‌ನಲ್ಲಿ ಬ್ಲ್ಯಾಕ್ ಪ್ಯಾಂಥರ್ಸ್ ತಂಡ ಪ್ರಶಸ್ತಿ ಪಡೆಯಿತು.
ಗ್ರಾಮದ ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ನಡೆದ ಲೀಗ್‌ನ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ತಂಡ 23-21 ಪಾಯಿಂಟ್‌ಗಳಿಂದ ಡ್ರೀಮ್ ವರ್ಲ್ಡ್ ತಂಡವನ್ನು ಮಣಿಸಿತು. ಉತ್ತಮ ಪೈಪೋಟಿ ನೀಡಿದ ಡ್ರೀಮ್ ವರ್ಲ್ಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ವಿಜೇತ ತಂಡವು ಆಕರ್ಷಕ ಟ್ರೋಫಿ ಮತ್ತು ₹50 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ಡ್ರೀಂ ವರ್ಲ್ಡ್ ತಂಡ ಆಕರ್ಷಕ ಟ್ರೋಫಿ ಮತ್ತು ₹30 ನಗದು ಬಹುಮಾನ ಪಡೆಯಿತು.
ಪ್ರಥಮ ಕ್ವಾಲಿಫೈಯರ್ ಪಂದ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ಸ್ ತಂಡ ಡ್ರೀಂ ವರ್ಲ್ಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಎಲಿಮಿನೇಟರ್ ಪಂದ್ಯದಲ್ಲಿ ಜಿಂಗಲಕ ತಂಡವು ಸೆವೆನ್ ಈಗಲ್ ತಂಡ ಮಣಿಸಿ ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಅರ್ಹತೆ ಗಳಿಸಿತ್ತು. 2ನೇ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಡ್ರೀಂ ವರ್ಲ್ಡ್ ತಂಡ ಜಿಂಗಲಕ ತಂಡವನ್ನು ಮಣಿಸಿ ಫೈನಲ್ಸ್‌ಗೆ ಅರ್ಹತೆ ಪಡೆದುಕೊಂಡಿತ್ತು.
ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಜ್ವಲ್, ಉತ್ತಮ ರೈಡರ್ ಪ್ರಶಸ್ತಿಯನ್ನು ದರ್ಶನ್, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಅಜಿಲೇಶ್ ಪಡೆದರು.
ಎರಡು ದಿನ ನಡೆದ ಕಬಡ್ಡಿ ಟೂರ್ನಿಯಲ್ಲಿ ಸಮೀಪದ ಹೆಗ್ಗಳ, ಪೆರುಂಬಾಡಿ, ಬೋಯಿಕೇರಿ, ವಿರಾಜಪೇಟೆ ಪಟ್ಟಣದ ಎಂಟು ತಂಡಗಳು ಭಾಗವಹಿಸಿದ್ದವು. ಚೇತನ್, ಕಾರ್ತಿಕ್ ಮತ್ತು ಜಾನ್ಸನ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಉತ್ತಮ ಬಾಂಧ್ಯವಕ್ಕೆ ಕ್ರೀಡೆ ಸಹಕಾರಿ: ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆಯಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತಿದೆ. ಜೊತೆಗೆ ಗ್ರಾಮಗಳ ನಡುವೆಯೂ ಉತ್ತಮ ಬಾಂಧವ್ಯ ಹೊಂದಲು ಸಹಕಾರಿಯಾಗಿದೆ ಎಂದರು.
ಯೂತ್ ಫ್ರೆಂಡ್ಸ್‌ನ ಅಧ್ಯಕ್ಷ ಹರೀಶ್ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕೆಡಿಪಿ ಸದಸ್ಯ ಶಶಿ, ಸಿ.ಆರ್. ಬಾಬು, ಮಾಜಿ ಸೈನಿಕ ವಾಸು, ಕೆ.ಕೆ. ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಯೂತ್ ಫ್ರೆಂಡ್ಸ್ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ವಿವಿಧ ತಂಡಗಳ ಮಾಲೀಕರು, ಕ್ರೀಡಾಪ್ರೇಮಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.