ADVERTISEMENT

ಭದ್ರತಾ ಯೋಜನೆ ಪ್ರಯೋಜನ ಪಡೆಯಿರಿ: : ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಂಜಿತ್ ಸಲಹೆ

ಜನ ಸುರಕ್ಷಾ ಅಭಿಯಾನ: ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಂಜಿತ್ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 6:06 IST
Last Updated 24 ಆಗಸ್ಟ್ 2025, 6:06 IST
ವಿರಾಜಪೇಟೆ ಸಮೀಪದ ಚನ್ನಯ್ಯನಕೋಟೆಯಲ್ಲಿ ಈಚೆಗೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ನಡೆಯಿತು 
ವಿರಾಜಪೇಟೆ ಸಮೀಪದ ಚನ್ನಯ್ಯನಕೋಟೆಯಲ್ಲಿ ಈಚೆಗೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ನಡೆಯಿತು    

ವಿರಾಜಪೇಟೆ:‘ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಪ್ರಧಾನಮಂತ್ರಿ ಸುರಕ್ಷ ಬಿಮಾ ಯೋಜನೆಯು ಒಂದು ಅಪಘಾತ ವಿಮೆಯಾಗಿದ್ದು ವಾರ್ಷಿಕ ₹20 ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ ₹2 ಲಕ್ಷ ವರೆಗಿನ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗಲಿದೆ’ ಎಂದು ಚನ್ನಯ್ಯನಕೊಟ್ಟೆಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಂಜಿತ್ ಹೇಳಿದರು.

ಸಮೀಪದ ಚನ್ನಯ್ಯನಕೋಟೆಯಲ್ಲಿ ಮಡಿಕೇರಿಯ ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ ಹಾಗೂ ಕೆನರಾ ಬ್ಯಾಂಕ್ ಚನ್ನಯ್ಯನಕೊಟ್ಟೆ ಹಾಗೂ ಚನ್ನಯ್ಯನಕೊಟ್ಟೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಈಚೆಗೆ ನಡೆದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮತನಾಡಿದರು.

‘ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಮುಖ್ಯ ಉದ್ದೇಶ ಕೂಡ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದು. ವಾರ್ಷಿಕವಾಗಿ ₹436 ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಸಂಭವಿಸಿದಲ್ಲಿ ಅಂತವರ ನಾಮಿನಿಗೂ ಕೂಡ ₹2 ಲಕ್ಷ ವಿಮಾ ಮೊತ್ತ ಸಿಗಲಿದೆ. ಎರಡೂ ವಿಮೆ ಮಾಡಿಸಿಕೊಂಡಲ್ಲಿ ₹4 ಲಕ್ಷವರೆಗಿನ ವಿಮಾ ಮೊತ್ತ ದೊರೆಯಲಿದೆ. ಅಲ್ಲದೆ 60 ವರ್ಷ ಆದ ನಂತರದಲ್ಲಿ ಪಿಂಚಣಿ ರೂಪದಲ್ಲಿ ₹1 ಸಾವಿರದಿಂದ ₹5 ಸಾವಿರ ವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಅಟಲ್ ಪಿಂಚಣಿ ಯೋಜನೆಯನ್ನು ಮಾಡಿಸಿ’ ಎಂದು ತಿಳಿಸಿದರು.

ADVERTISEMENT

ಅವಾರ್ಡ್ ಸಂಸ್ಥೆಯ ಆರ್ಥಿಕ ಸಮಾಲೋಚಕಿ ಮಂಜುಳಾ ಜೆ.ಕೆ ಹಾಗೂ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಅವರು ಸಭೆಯಲ್ಲಿ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.