
ವಿರಾಜಪೇಟೆ: ‘ಪುರಂದರದಾಸರ ಕೀರ್ತನೆ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಕರ್ನಾಟಕ ಸಂಗೀತದ ಪಾತ್ರ ಮಹತ್ವದ್ದು’ ಎಂದು ಬಾಳೆಲೆ ಕಾವೇರಿ ಕಲಾ ಸಮಿತಿ ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಹೇಳಿದರು.
ಸಮೀಪದ ಅರಮೇರಿಯ ಕಳಂಚೇರಿ ಮಠದ ಲಿಂಗರಾಜೇಂದ್ರ ಭವನದಲ್ಲಿ ಈಚೆಗೆ ನಡೆದ ಹೊಂಬೆಳಕು ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುವ ಸಮುದಾಯ ವಚನ ಗಾಯನ, ದೇವರನಾಮ ಸೇರಿದಂತೆ ಸಂಸ್ಕೃತಿಯ ಉಳಿವಿಗೆ ಶ್ರಮಿಸಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಪಿ. ಕೇಶವ ಕಾಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಕಾವೇರಿ ಕಲಾ ಸಮಿತಿ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲ ಸಾಹಿತ್ಯ ಮತ್ತು ನಾಡು ನುಡಿಗಳ ಉಳಿವಿನ ಗುರಿಯನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ವಚನ ಗಾಯನ ಮತ್ತು ದೇವರನಾಮಗಳು ಹೆಚ್ಚು ಜನರಿಗೆ ತಲುಪುವಂತಾಗಬೇಕು’ ಎಂದರು.
ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
ಬಾಳೆಲೆಯ ಕಾವೇರಿ ಕಲಾ ಸಮಿತಿಯ 10 ಸದಸ್ಯರು ವಚನ ಗಾಯನ ಮತ್ತು ದೇವರನಾಮ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.