
ವಿರಾಜಪೇಟೆಯಲ್ಲಿ ಅಂತರರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ಇತ್ತೀಚೆಗೆ ವಿಶೇಷ ಕರಾಟೆ ತರಬೇತಿ ಶಿಬಿರ ನಡೆಯಿತು
ವಿರಾಜಪೇಟೆ: ಅಂತರರಾಷ್ಟ್ರೀಯ ಕರಾಟೆ ಡು.ಗ್ಯೂಜೊಕಾಯಿ ಅಸೋಸಿಯೇಷನ್ ಇಂಡಿಯಾ ವತಿಯಿಂದ ಪಟ್ಟಣದ ಸಂತ ಅನ್ನಮ್ಮ ಶಾಲೆಯ ಸಮುದಾಯ ಭವನದಲ್ಲಿ ನಡೆದ ವಿಶೇಷ ಕರಾಟೆ ತರಬೇತಿ ಶಿಬಿರ ಈಚೆಗೆ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು, ಸಂಸ್ಕೃತಿಯೊಂದಿಗೆ ಸಮರ ಕಲೆಯು ಬೆರೆತಿದೆ. ಪುರಾತನ ಕಾಲದಲ್ಲಿ ಆತ್ಮರಕ್ಷಣೆಗಾಗಿ, ಸಮರಾಭ್ಯಾಸಕ್ಕೆ ಸಮರ ಕಲೆಯನ್ನು ಸಮರ್ಥ ತರಬೇತಿದಾರರು ಸೈನಿಕರಿಗೆ ಹೇಳಿಕೊಡುತಿದ್ದರು. ಅಂದು ಸಮರ ಕಲೆಯು ಆತ್ಮರಕ್ಷಣೆಗಾಗಿ ಮತ್ತು ರಾಜ್ಯ ಹಾಗೂ ಪ್ರದೇಶ ರಕ್ಷಣೆಗಾಗಿ ಸಿಮಿತವಾಗಿತ್ತು. ರಾಜ್ಯಾಧಿಕಾರ ಅಂತ್ಯಗೊಂಡ ತರುವಾಯ ಸಮರಕಲೆಯ ವಿವಿಧ ಪ್ರಕಾರಗಳನ್ನು ಸಾರ್ವಜನಿಕರು ಕಲಿಯುವ ಹಂತಕ್ಕೆ ಬೆಳೆದು ಬಂದಿದೆ. ಕಲೆಯನ್ನು ಉಳಿಸುವ ಪ್ರಯತ್ನ ಮತ್ತು ಪ್ರೋತ್ಸಾಹವನ್ನು ಪ್ರತಿಯೊಬ್ಬರು ನೀಡಬೇಕು ಎಂದರು.
ಗೋಜೋರಾಯಿ ಕರಾಟೆ ಶಾಲೆಯ ಮುಖ್ಯ ತರಬೇತಿ ಶಿಕ್ಷಕ ಸೆನ್ಸಾಯಿ ಎಂ.ಬಿ. ಚಂದ್ರನ್ ಅವರ ನೇತೃತ್ವದಲ್ಲಿ ಶ್ರೀ ರಾಮ ಟ್ರಸ್ಟ್ ಎಕ್ಸಲ್ ಶಾಲೆ ನಾಪೋಕ್ಲು, ಶ್ರೀ ಶಾಂತಮಲ್ಲಿಕಾರ್ಜುನ ವಿದ್ಯಾಪೀಠ ಅರಮೇರಿ ಮತ್ತು ಸಂತ ಅನ್ನಮ್ಮ ಶಾಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ಪ್ರಕಾರಗಳ ಕರಾಟೆ ತರಬೇತಿ ನಡೆಯಿತು.
ತರಬೇತಿ ಶಿಬಿರದಲ್ಲಿ ವಿವಿಧ ಶಾಲೆಯ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಭಾರತ ಮುಖ್ಯ ಶಿಕ್ಷಕ ಸೆನ್ ಸಾಯಿ ಟಿ.ಡಿ. ಜಾನ್ಸನ್, ಸಹ ಶಿಕ್ಷಕ ಸೆನ್ ಸಾಯಿ ಮೋಹನ್ ದಾಸ್ ಅವರು ತರಬೇತಿ ನೀಡಿದರು.
ಶಿಬಿರದಲ್ಲಿ ಸಿ.ಎಚ್. ಬಷೀರ್, ಹರಿಕೃಷ್ಣನ್, ಮನೀಷ್, ಆಕಾಶ್, ಸದೀನ್ ಮತ್ತು ಪೂವಯ್ಯ, ಪೋಷಕರು ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.