
ವಿರಾಜಪೇಟೆ: ‘ಶೈಕ್ಷಣಿಕವಾಗಿ ಮುಂದುವರೆದಲ್ಲಿ ಮಾತ್ರ ಸಮುದಾಯದ ಪ್ರಗತಿ ಸಾಧ್ಯ’ ಎಂದು ಎಸ್.ಎನ್.ಡಿ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಕೆ. ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮುತ್ತಪ್ಪ ದೇವಾಲಯದ ಮುತ್ತಪ್ಪ ಕಲಾ ಮಂಟಪದಲ್ಲಿ ಈಚೆಗೆ ನಡೆದ ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘಟನೆ 100 ವರ್ಷಗಳ ಇತಿಹಾಸ ಹೊಂದಿದ್ದು. ಅಂದು ರೂಪಿಸಲಾದ ಬೈಲಾದಂತೆ ಇಂದು ಎಲ್ಲಾ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸ್ವತಂತ್ರ ಪೂರ್ವದಿಂದಲೂ ಶೋಷಿತ ಸಮುದಾಯಗಳು ಮೇಲ್ವರ್ಗದ ತುಳಿತಕ್ಕೊಳಗಾಗಿವೆ. ಆದರೆ ಸಮಾಜದವರು ಇಂದು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಮಾತನಾಡಿ, ‘ಶಾಖೆಯು ಕಳೆದ 3 ವರ್ಷಗಳ ಅವಧಿಯಲ್ಲಿ ಸಮುದಾಯದ ಸಾಧಕರನ್ನು ಗುರುತಿಸಿ ಸನ್ಮಾನ ಮತ್ತು ವಿವಿಧ ಕಾರ್ಯಗಳಿಗೆ ಸಹಾಯಧನವನ್ನು ಒದಗಿಸಿದೆ’ ಎಂದರು.
ಶಾಖೆಯ ಕಾರ್ಯದರ್ಶಿ ಟಿ.ಕೆ. ಪದ್ಮನಾಭ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಳೆದ ಸಾಲಿನಲ್ಲಿ ಅಗಲಿದ ಶಾಖೆಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸೆಸ್ಕ್ ಸಹಾಯಕ ಎಂಜಿನಿಯರ್ ಸೋಮೇಶ್ ಮತ್ತು ಬಿಲ್ಲವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಗಣೇಶ್, ಜಿಲ್ಲಾ ಯೂನಿಯನ್ ಉಪಾಧ್ಯಕ್ಷ ಕೆ. ರಾಜನ್, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಗಿರೀಶ್, ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್ ಉಪಸ್ಥಿತರಿದ್ದರು.
2026-29ನೇ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಟಿ.ಎ. ನಾರಾಯಣ, ಉಪಾಧ್ಯಕ್ಷರಾಗಿ ಟಿ.ಆರ್. ಗಣೇಶ್, ಕಾರ್ಯದರ್ಶಿಯಾಗಿ ಟಿ.ಕೆ.ಪದ್ಮನಾಭ ಅವರು ಪುನರ್ ಆಯ್ಕೆಗೊಂಡರು.