ಸಿದ್ದಾಪುರ: ರಸ್ತೆ ಬದಿಯಲ್ಲಿದ್ದ ಟೀ ಅಂಗಡಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ಅತ್ತಿಮಂಗಲ ತಿರುವಿನಲ್ಲಿ ಜಬ್ಬಾರ್ ಎಂಬವರು ರಸ್ತೆ ಬದಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಮಂಗಳವಾರ ಬೆಳಿಗ್ಗೆ ಎಂದಿನಂತೆ ಅಂಗಡಿಗೆ ಪತ್ನಿಯೊಂದಿಗೆ ಬಂದಿದ್ದರು. 8.30ಕ್ಕೆ ಸಮೀಪದ ಕಾಫಿ ತೋಟದಿಂದ ಮರಿ ಆನೆಯೊಂದಿಗೆ ಕಾಡಾನೆ ಅಂಗಡಿ ಬಳಿ ಬಂದಿದ್ದು, ಅಂಗಡಿಯಲ್ಲಿದ್ದ ಪದಾರ್ಥಗಳನ್ನು ಎಳೆದು ಜಖಂಗೊಳಿಸಿತು.
ಈ ವೇಳೆ ಜಬ್ಬಾರ್ ಹಾಗೂ ಪತ್ನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಸಮೀಪದ ಬಸ್ ತಂಗುದಾಣದಲ್ಲಿದ್ದ ಜನರು ಕಿರುಚಿದ ಬಳಿಕ ಕಾಡಾನೆ ಹಾಗೂ ಮರಿ ಸಮೀಪದ ಮೇರಿಲ್ಯಾಂಡ್ ಎಸ್ಟೇಟ್ ಕಡೆಗೆ ಹೋಗಿದೆ. ಈ ವೇಳೆ ಬಸ್ ತಂಗುದಾಣದಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಇದ್ದು, ಕಾಡಾನೆ ಕಂಡು ಭಯಗೊಂಡರು.
ಕಾರ್ ಮೇಲೆ ದಾಳಿ: ಟೀ ಅಂಗಡಿ ದಾಳಿ ನಂತರ ಮೇರಿ ಲ್ಯಾಂಡ್ ತೋಟಕ್ಕೆ ತೆರಳಿದ್ದು, ಮಡಿಕೇರಿಗೆ ಕಾರಿನಲ್ಲಿ ತೆರಳುತ್ತಿದ್ದ ಎಸ್ಟೇಟ್ ಮಾಲೀಕ ಲಿಸ್ಲಿ ಪಿಂಟೋ ಅವರ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆ ಕಂಡು ಕಾರನ್ನು ಹಿಂದಕ್ಕೆ ಚಲಾಯಿಸಿದರೂ, ಬೆನ್ನಟ್ಟಿ ಬಂದ ಆನೆ ದಾಳಿ ನಡೆಸಿದೆ. ಈ ವೇಳೆ ಲಿಸ್ಲಿ ಮೌನವಾಗಿ ಕಾರಿನಲ್ಲೇ ಕುಳಿತಿದ್ದು, ಸ್ವಲ್ಪ ಸಮಯದ ಬಳಿಕ ತೋಟಕ್ಕೆ ತೆರಳಿತು.
ನೆಲ್ಯಹುದಿಕೇರಿ ಭಾಗದಲ್ಲಿ ಹಾಡಹಗಲಲ್ಲೇ ಆನೆಗಳು ಓಡಾಡಿ ದಾಳಿ ನಡೆಸಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಇವುಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಬೇಕು ಹಾಗೂ ಮರಳಿ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕಾಡಾನೆ ಕಾಡಿಗೆ ಅಟ್ಟಲು ಕಾರ್ಯಾಚರಣೆ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.