ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಫಸಲುಭರಿತ ಬೆಳೆಗಳನ್ನು ತಿಂದ ತುಳಿದು ನಷ್ಟಪಡಿಸುತ್ತಿವೆ.
ಸಮೀಪದ ಚೆಟ್ಟಳ್ಳಿ ಗ್ರಾಮದ ನಿವಾಸಿ ಹೊಸಮನೆ ಪೂವಯ್ಯ ಅವರ ತೋಟಕ್ಕೆ ಕಾಡಾನೆ ಹಿಂಡು ನುಗ್ಗಿ ದಾಂದಲೆ ನಡೆಸಿ ಅಪಾರ ಬೆಳೆ ನಷ್ಟ ಮಾಡಿವೆ.
ಮಳೆಗಾಲ ಪ್ರಾರಂಭವಾದಗಿನಿಂದ ನಿರಂತರವಾಗಿ ಈ ಭಾಗದಲ್ಲಿ ಕಾಡಿನಿಂದ ಬಂದ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು, ಕಾಫಿ, ಕರಿಮೆಣಸು, ತೆಂಗು, ಬಾಳೆ ತೋಟಗಳನ್ನು ದ್ವಂಸಗೊಳಿಸಿ ಭಾರಿ ಪ್ರಮಾಣದಲ್ಲಿ ನಷ್ಟಪಡಿಸಿವೆ ಎಂದು ಹೊಸಮನೆ ಪೂವಯ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕಾಡಾನೆಯ ದಾಳಿಯಿಂದ ಉಂಟಾದ ನಷ್ಟ ಪರಿಹಾರಕ್ಕಾಗಿ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಭಾಗದ ಕೆಲ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ನುಗ್ಗುತ್ತಿವೆ. ಕೂಲಿ ಕಾರ್ಮಿಕರು ತೋಟಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲ್ಲ ದಾಖಲಾತಿಗಳನ್ನು ನೀಡಿ ಪರಿಹಾರಕ್ಕೆ ಕಳೆದ ವರ್ಷ ಮನವಿ ಸಲ್ಲಿಸಿದರೂ ಇದುವರೆಗೆ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ಮೌನವಹಿಸಿದೆ ಎಂದು ಈ ಭಾಗದ ಕೃಷಿಕರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಕೃಷಿಕರ ಭೂಮಿಯಿಂದ ಆನೆಗಳನ್ನು ಅರಣ್ಯಗಳಿಗೆ ಓಡಿಸುವಂತೆ ಒತ್ತಾಯಿಸಿದ್ದಾರೆ.
ನಾಕೂರು, ನೆಟ್ಲಿ‘ಬಿ’, ಏಳನೇ ಹೊಸಕೋಟೆ ಭಾಗಗಳಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟು ಬೆಳೆ ನಷ್ಟ ಪಡಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.