ನಾಪೋಕ್ಲು: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಚೆಂಬು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕೃಷಿಕರು ಹೈರಾಣಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಚೆಂಬು ಗ್ರಾಮದ ಸುತ್ತಮುತ್ತಲಿನ ಊರುಗಳಾದ ಊರುಬೈಲು, ದಬ್ಬಡ್ಕ, ಆನೆಹಳ್ಳ, ಕಾಂತಬೈಲು ಭಾಗದಲ್ಲಿ ನಿರಂತರವಾಗಿ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು ಅಡಿಕೆ, ಬಾಳೆ, ತೆಂಗು, ಗೇರು ಹೀಗೆ ಫಸಲು ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದೀಗ ಪೆರಾಜೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ದಾಂದಲೆ ನಡೆಸುತ್ತಿವೆ.
ಗ್ರಾಮದ ಕೃಷಿಕ ದಿವಾಕರ ಅವರ ಕೃಷಿ ಫಾರಂಗೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು ಲಕ್ಷಾಂತರ ರೂಪಾಯಿಗಳ ಕೃಷಿ ಬೆಳೆಗಳನ್ನು ನಾಶಪಡಿಸಿವೆ. ತೋಟದಲ್ಲಿನ ಬಾಳೆ ಗಿಡಗಳನ್ನು, ಅಡಿಕೆ ಮರಗಳನ್ನು ಧ್ವಂಸ ಮಾಡಿದ ಕಾಡಾನೆಗಳು ನಾಟಿಮಾಡಿದ ಗದ್ದೆಗಳನ್ನೂ ಹಾಳುಗೆಡವಿವೆ.
ಹಲವು ತಿಂಗಳಿನಿಂದ ಅರಂಬೂರು, ಪರಿವಾರಕಾನ, ಪೆರಾಜೆ ಭಾಗದಲ್ಲಿ ಕಾಡಾನೆಗಳು ಕೃಷಿ ಹಾನಿ ಮಾಡುತ್ತಿವೆ ಆನೆಗಳ ಹಿಂಡು ಜನವಸತಿ ಪ್ರದೇಶದ ಸಮೀಪದಲ್ಲಿ ಇರುವ ಕಾಡಿನಲ್ಲಿ ಬೀಡು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಹಲವು ತಿಂಗಳಿನಿಂದ ಸುತ್ತಾಟ ನಡೆಸುತ್ತಿರುವ ಆನೆಗಳ ಹಿಂಡು ವ್ಯಾಪಕವಾಗಿ ಕೃಷಿಹಾನಿ ಉಂಟು ಮಾಡುತ್ತಿವೆ. ಈ ಆನೆಗಳ ಹಿಂಡನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಆನೆಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳು, ಕಾರ್ಮಿಕರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನ ವಾಗುತ್ತಿಲ್ಲ. ಆನೆಗಳಿಂದ ಯಾವುದೇ ಅನಾಹುತ ಸಂಭವಿಸುವ ಮೊದಲು ಆನೆಗಳನ್ನು ಕಾಡಿಗೆ ಅಟ್ಟಬೇಕು ಮತ್ತು ಕೃಷಿಯಿಂದ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.