ADVERTISEMENT

ಎಮ್ಮೆಮಾಡು ಜಮಾತ್ ಅಧ್ಯಕ್ಷರಿಂದ ಕೊಲೆ ಬೆದರಿಕೆ: ಸಂತ್ರಸ್ತ ಮಹಿಳೆ ಆರೋಪ

‘ದರ್ಗಾ ಶರೀಫ್‌ಗೆ ಆಗಮಿಸಿ ಪ್ರಮಾಣ ಮಾಡಲಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST
   

ಮಡಿಕೇರಿ: ‘ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಸುಳ್ಳು ಎಂದು ವಾದಿಸುತ್ತಿರುವ ಎಮ್ಮೆಮಾಡು ಜಮಾತ್ ಅಧ್ಯಕ್ಷರುಎಮ್ಮೆಮಾಡು ದರ್ಗಾ ಶರೀಫ್‌ಗೆ ಆಗಮಿಸಿ ಪ್ರಮಾಣ ಮಾಡಲಿ’ ಎಂದು ಸಂತ್ರಸ್ತ ಮಹಿಳೆ ಸವಾಲೆಸೆದಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಖಾದರ್ ಹಾಜಿ ಪತ್ನಿ ಹಾಗೂ ಮಕ್ಕಳು ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಖಾದರ್ ಹಾಜಿಗೆ ಊಟ ಬಡಿಸಬೇಕೆಂದು ಪತ್ನಿ ಹೇಳಿದ್ದರು. ಈ ಹಿನ್ನೆಲೆ ಮನೆಗೆ ಹೋದ ಸಂದರ್ಭ ಜಮಾತ್ ಅಧ್ಯಕ್ಷ ಖಾದರ್ ಹಾಜಿ ನನ್ನ ಕೈಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದರು. ಅಲ್ಲದೇ, ಪ್ರಭಾವಿ ವ್ಯಕ್ತಿ ಎಂಬ ಕಾರಣಕ್ಕೆ ಹೊರಗೆ ಯಾರಿಗಾದರೂ ಹೇಳಿದರೆ ನಾನು ಯಾರು ಎಂದು ತೋರಿಸುತ್ತೇನೆ ಎನ್ನುವ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದರು’ ಎಂದು ಆರೋಪಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಹೋದರರು ಇತ್ತೀಚೆಗೆ ಹೇಳಿಕೆ ನೀಡಿದ್ದು, ಬಾಡಿಗೆ ಹಣ ನೀಡಲು ಬಾಕಿ ಇರುವುದರಿಂದ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ. ಕಳೆದ 6 ವರ್ಷಗಳಿಂದ ಖಾದರ್ ಹಾಜಿ ಬಾಡಿಗೆ ಮನೆಯಲ್ಲಿರುವ ನಾವು ತಿಂಗಳಿಗೆ ₹ 2 ಸಾವಿರದಂತೆ ಬಾಡಿಗೆ ಸಂಪೂರ್ಣವಾಗಿ ಪಾವತಿಸಿದ್ದೇವೆ. ಈ ಒಂದು ತಿಂಗಳ ಬಾಡಿಗೆ ಮಾತ್ರ ಬಾಕಿ ಉಳಿದಿದೆ. ಹೀಗಿದ್ದರೂ ಮನೆಗೆ ಬೀಗ ಹಾಕಿ ಮನೆಯಿಂದ ಯಾವುದೇ ಸಾಮಗ್ರಿಗಳನ್ನು ಕೊಂಡೊಯ್ಯದಂತೆ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಆರೋಪಿ ಹೇಳಿರುವುದೆಲ್ಲವೂ ನಿಜ ಎಂದು ಎಮ್ಮೆಮಾಡು ದರ್ಗಾ ಶರೀಫ್‌ನಲ್ಲಿ ಪ್ರಮಾಣ ಮಾಡಲಿ. ಏನೂ ನಡೆದಿಲ್ಲ ಎನ್ನುವವರು ಪ್ರಕರಣ ಇತ್ಯರ್ಥಗೊಳಿಸಲು ಪರಿಹಾರದ ಆಮಿಷವೊಡ್ಡಿ ತನಗೆ ಮತ್ತು ತಾಯಿಗೆ ಕರೆ ಮಾಡಿದ್ದು ಯಾಕೆ’ ಎಂದು ಸಂತ್ರಸ್ತೆ ಪ್ರಶ್ನಿಸಿದರು.

ಪ್ರಕರಣದ ಸಂಬಂಧ ಜಮಾತ್‌ಗೆ ದೂರು ನೀಡಲಾಗಿತ್ತು. ಅಲ್ಲಿ ಯಾವುದೇ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಸ್‌ಪಿ ಗಮನಕ್ಕೂ ತರಲಾಗಿದೆ. ತನಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಮಹಿಳೆಯ ಸಂಬಂಧಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.