ADVERTISEMENT

ಕಾವೇರಿ ನಾಡಿನಲ್ಲಿ ‘ಕಾವೇರಿ ಪಡೆ’

ಮಹಿಳೆಯರು, ಯುವತಿಯರ ರಕ್ಷಣೆಗೆ ಸಜ್ಜಾದ ಮಹಿಳಾ ಸಿಬ್ಬಂದಿ ಒಳಗೊಂಡ ತಂಡ

ಅದಿತ್ಯ ಕೆ.ಎ.
Published 1 ಅಕ್ಟೋಬರ್ 2020, 19:31 IST
Last Updated 1 ಅಕ್ಟೋಬರ್ 2020, 19:31 IST
ಕ್ಷಮಾ ಮಿಶ್ರಾ
ಕ್ಷಮಾ ಮಿಶ್ರಾ   

ಮಡಿಕೇರಿ: ಹಸಿರು ಬಣ್ಣದ ಟೀ ಶರ್ಟ್‌ ತೊಟ್ಟ ಮಹಿಳಾ ಸಿಬ್ಬಂದಿ, ಮಿಲಿಟರಿ ಸಮವಸ್ತ್ರದ ಪ್ಯಾಂಟ್‌ ಹಾಗೂ ಹ್ಯಾಟ್‌, ಅವರ ಹಿಂಬದಿಯಲ್ಲೊಂದು ವಾಹನ... ಇದೇನಪ್ಪಾ ಎಂಬ ಕುತೂಹಲವೇ!

ಹೌದು..., ಕಾವೇರಿ ನಾಡಿನ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೋಸ್ಕರ ನೂತನವಾಗಿ ‘ಕಾವೇರಿ ಪಡೆ’ ಎಂಬ ಪೊಲೀಸ್‌ ತಂಡ ಅಸ್ತಿತ್ವಕ್ಕೆ ಬಂದಿದೆ.

ಜಿಲ್ಲೆಯ ಯಾವುದೇ ಮೂಲೆಯಲ್ಲಿ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರು ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಗೆ ಸಿಲುಕಿರುವ ಮಾಹಿತಿ, ದೂರು ಬಂದ ಕೂಡಲೇ ಆ ಸ್ಥಳದಲ್ಲಿ ಈ ತಂಡವು ಪ್ರತ್ಯಕ್ಷವಾಗಲಿದೆ. ಅವರಿಗೆ ರಕ್ಷಣೆ ನೀಡಲಿದೆ; ಕಾರ್ಯಾಚರಣೆ ನಡೆಸಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ರಕ್ಷಿಸಲಿದೆ.

ADVERTISEMENT

ಈ ಹೊಸ ವ್ಯವಸ್ಥೆಗೆ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಹಸಿರು ನಿಶಾನೆ ತೋರಿದ್ದು ಪೊಲೀಸ್‌ ಪಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಈ ಮಹಿಳಾ ಪೊಲೀಸ್‍ ತಂಡದ ಸದಸ್ಯರಿಗೆ ಪ್ರತ್ಯೇಕವಾದ ಸಮವಸ್ತ್ರವನ್ನು ಒದಗಿಸಲಾಗಿದೆ. ಕಾವೇರಿ ಪಡೆಯ ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಗಸ್ತು ತಿರುಗಲು ಪ್ರತ್ಯೇಕವಾದ ಒಂದು ವಾಹನದ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌, ಇತರೆ 16 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಿರುವ ಈ ಕಾವೇರಿ ಪಡೆಯು ಮಹಿಳೆಯರು, ಯುವತಿಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಸಾರ್ವಜನಿಕ ಶೋಷಣೆಯ ವಿರುದ್ಧ ಕಾರ್ಯಾಚರಣೆ ನಡೆಸಲಿದೆ.

ಶಾಲಾ, ಕಾಲೇಜು ಸುತ್ತ ಹದ್ದಿನ ಕಣ್ಣು: ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅಬ್ಬಕ್ಕ ಪಡೆ, ಚಾಮುಂಡಿ ಪಡೆ, ಓಬವ್ವ ಪಡೆಗಳನ್ನು ಪೊಲೀಸ್ ಇಲಾಖೆ ರಚಿಸಿದ್ದು ಅದೇ ಮಾದರಿಯಲ್ಲಿ ಜೀವನ ನದಿ ಕಾವೇರಿಯ ತವರೂರು ಕೊಡಗು ಜಿಲ್ಲೆಯಲ್ಲಿ ಕಾವೇರಿ ಪಡೆಯು ಅಸ್ತಿತ್ವಕ್ಕೆ ತರಲಾಗಿದೆ.

ತಂಡದ ಕಾರ್ಯವೇನು?: ಕೊರೊನಾ ಕಾರಣಕ್ಕೆ ಶಾಲಾ– ಕಾಲೇಜುಗಳು ಈ ವರ್ಷ ಇನ್ನೂ ಆರಂಭವಾಗಿಲ್ಲ. ಶಾಲಾ– ಕಾಲೇಜುಗಳು ಆರಂಭವಾದರೆ, ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ತಂಡವು ಹದ್ದಿನ ಕಣ್ಣು ಇಡಲಿದೆ. ಜೊತೆಗೆ ಹೆಣ್ಣು ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ನೀಡುವ ಪುಂಡರಿಗೆ ತಂಡವು ಬಿಸಿ ಮುಟ್ಟಿಸಲಿದೆ.

ಪ್ರತಿದಿನ ಜಿಲ್ಲೆಯ ವಿವಿಧ ಪಟ್ಟಣಗಳ ಶಾಲಾ– ಕಾಲೇಜು, ಬಸ್‍ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚಿನ ನಿಗಾ ವಹಿಸಲಿದೆ ‘ಕಾವೇರಿ ಪಡೆ’.

ಮಹಿಳೆಯರ ರಕ್ಷಣೆಗೋಸ್ಕರವೇ ವಿಶೇಷವಾಗಿ ಈ ತಂಡವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆಯಾದರೆ ನೇರವಾಗಿ ಕಾವೇರಿ ಪಡೆಯ ಅಧಿಕಾರಿಗಳಿಗೆ ಅಥವಾ ಪೊಲೀಸ್‍ ಕಂಟ್ರೋಲ್‍ ರೂಂ ಸಂಖ್ಯೆ 100 ಅಥವಾ ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಗಸ್ತು:
ಕಾವೇರಿ ಪಡೆಯನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಮಹಿಳಾ ಸಿಬ್ಬಂದಿ ಸರದಿಯಂತೆ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರ ತನಕ ಜಿಲ್ಲೆಯಾದ್ಯಂತ ಕಾವೇರಿ ಪಡೆ ಗಸ್ತು ತಿರುಗಲಿದ್ದು, ಪ್ರಮುಖ ಠಾಣಾ ವ್ಯಾಪ್ತಿಗಳಲ್ಲಿ ಸಂಚಾರ ನಡೆಸಲಿದೆ. ಜೊತೆಗೆ, ಬಂದೋಬಸ್ತ್‌ ವೇಳೆಯೂ ಈ ಸಿಬ್ಬಂದಿ ಕೆಲಸ ಮಾಡಬೇಕಿದೆ.

‘ಕಾವೇರಿ ಪಡೆ’ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗೆ ವಿವಿಧ ಕಾನೂನುಗಳ ತಿಳಿವಳಿಕೆ, ಜನಸ್ನೇಹಿ ಪೊಲೀಸ್ ವ್ಯವಸ್ಥೆ, ಲಿಂಗಸಂವೇದನೆ ಹಾಗೂ ಮಹಿಳೆಯರ, ಮಕ್ಕಳ ಬಗೆಗಿನ ಕಾನೂನಿನ ಬಗ್ಗೆ ತರಬೇತಿ ನೀಡಲಾಗಿದೆ. ಅವರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.