ADVERTISEMENT

ಏಕತೆ, ಒಗ್ಗಟ್ಟಿನಿಂದ ದೇಶದ ಪ್ರಗತಿಗೆ ಸಹಕಾರ ನೀಡಿ: ಸಂಸದ ಒಡೆಯರ್

ಬಾಳುಗೋಡುವಿನಲ್ಲಿ ಕೊಡವ ನಮ್ಮೆಯ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:38 IST
Last Updated 7 ನವೆಂಬರ್ 2025, 7:38 IST
ವಿರಾಜಪೇಟೆ ಸಮೀಪದ ಬಾಳುಗೋಡುವಿನ ಕೊಡವ ಸಮಾಜ ಒಕ್ಕೂಟದ ವತಿಯಿಂದ ಕೊಡವ ನಮ್ಮೆಯ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಚಾಲನೆ ನೀಡಿದರು.
ವಿರಾಜಪೇಟೆ ಸಮೀಪದ ಬಾಳುಗೋಡುವಿನ ಕೊಡವ ಸಮಾಜ ಒಕ್ಕೂಟದ ವತಿಯಿಂದ ಕೊಡವ ನಮ್ಮೆಯ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಚಾಲನೆ ನೀಡಿದರು.   

ವಿರಾಜಪೇಟೆ: ಸಂಸ್ಕೃತಿ, ಏಕತೆ, ಒಗ್ಗಟ್ಟುಗಳನ್ನು ಸೃಷ್ಟಿಸುವಲ್ಲಿ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಏಕತೆ ಮತ್ತು ಒಗ್ಗಟ್ಟಿನಿಂದ ಎಲ್ಲರೂ ಒಂದುಗೂಡಿ ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕರೆ ನೀಡಿದರು.

ಸಮೀಪದ ಬಾಳುಗೋಡುವಿನ ಕೊಡವ ಸಮಾಜ ಒಕ್ಕೂಟವು ವತಿಯಿಂದ ಕೊಡವ ನಮ್ಮೆಯ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡವ ಸಮಾಜ ಒಕ್ಕೂಟದ ಸಮುಚ್ಚಯದಲ್ಲಿ ಅನೇಕ ಕಾಮಗಾರಿ ನಡೆಯುತ್ತಿದ್ದು, ಇನ್ನು ಅನೇಕ ಪ್ರಗತಿ ಕಾರ್ಯ ಬಾಕಿ ಇದ್ದು ಅನುದಾನಕ್ಕೆ ಬೇಡಿಕೆ ಬಂದರೆ, ಬೇರೆ ಮೂಲಗಳಿಂದ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ದೂರಸಂಪರ್ಕ ವ್ಯವಸ್ಥೆ ಸರಿಪಡಿಸಲು ಹಾಗೂ ಬಿಎಸ್‌ಎನ್‌ಎಲ್‌ 5 ಜಿ ಅಳವಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಕೆಲವು ಕಡೆ ನೂತನ ಟವರ್ ಅಳವಡಿಕೆಗೆ ಭೂ ಸ್ವಾಧಿನ ಕಾರ್ಯ ಪ್ರಗತಿಯಲ್ಲಿದೆ ಎಂದರು.

ADVERTISEMENT

ಶ್ರೀರಂಗಪಟ್ಟಣ- ಕುಶಾಲನಗರ ಹೆದ್ದಾರಿ ಅಭಿವೃದ್ಧಿಗೆ ಕೆಲವು ಕಡೆ ಅರಣ್ಯ ಇಲಾಖೆಯ ಅಡ್ಡಿಯಿದ್ದು, ಶೀಘ್ರದಲ್ಲಿ ಅನುಮತಿ ದೊರೆತು ಕಾಮಗಾರಿ ಬೇಗನೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಸೇನೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯು ಛಾಪು ಮೂಡಿಸಿದೆ. ಕಲೆ, ಕ್ರೀಡೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೊಡವ ಸಮಾಜಗಳ ಒಕ್ಕೂಟ ಮುಂದಾಗಿರುವುದು ಶ್ಲಾಘನೀಯ ಎಂದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೆರೀರ ಪೂವಯ್ಯ, ಕೊಡವ ಸಮಾಜ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಯಪ್ಪ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಕೊಡಗು ಹಾಕಿ ಸಂಸ್ಥೆಯ ಅಧ್ಯಕ್ಷ ಪಳಂಗಂಡ ಲವ ಕುಮಾರ್, ಒಲಂಪಿಯನ್ ಚೆಪ್ಪುಡಿರ ಪೂಣಚ್ಚ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಕೊಡವ ಸಮಾಜ ಒಕ್ಕೂಟದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.