ADVERTISEMENT

ಸಂಸದ ಯದುವೀರ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ರದ್ದಾದ ರೈಲು ಯೋಜನೆ ಕುರಿತು ಸುಳ್ಳು ಹೇಳದಂತೆ ಮನವಿ,

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:04 IST
Last Updated 1 ಫೆಬ್ರುವರಿ 2026, 7:04 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮಡಿಕೇರಿ: ‘ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಸದರಾದ ಮೇಲೆ ಕೊಡಗು– ಮೈಸೂರು ಭಾಗದ 6 ಪ‍್ರಮುಖ ಯೋಜನೆಗಳು ಸ್ಥಗಿತಗೊಂಡಿವೆ. ಅದರಲ್ಲಿ ಕೊಡಗಿಗೆ ರೈಲು ಸಂಪರ್ಕ ಯೋಜನೆಯೂ ಸೇರಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

‘ಮಹಾರಾಜರ ವಂಶಸ್ಥರು ಎಂಬ ಕಾರಣಕ್ಕೆ ಜನರು ಅವರಿಗೆ ಮತ ಹಾಕಿದರು. ರಾಜಮನೆತನದವರು ಎಂದು ಅವರ ಮೇಲೆ ಬಹಳ ಗೌರವ ಇದೆ. ಆದರೆ, ಅವರು ಈ ರೀತಿ ಸುಳ್ಳು ಹೇಳಬಾರದು’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕೊಡಗಿಗೆ ರೈಲು ಸಂಪರ್ಕ ನೀಡುವ ಯೋಜನೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಅದನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ನೈರುತ್ಯ ವಲಯದ ಅಧಿಕಾರಿಗಳೆ ಹೇಳಿದ್ದಾರೆ. ಆದರೆ, ಯದುವೀರ್ ಅವರು ಅದನ್ನು ಮುಚ್ಚಿಟ್ಟು ರಾಜ್ಯಸರ್ಕಾರ ಭೂಸ್ವಾಧೀನ ಮಾಡಿಕೊಡದೇ ಇದ್ದದ್ದಕ್ಕೆ ಸ್ಥಗಿತಗೊಂಡಿದೆ ಎಂದು ಹುಸಿ ಆರೋಪ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ADVERTISEMENT

‘ಈಗಾಗಲೇ ರಾಜ್ಯ ಸರ್ಕಾರ 1,300ಕ್ಕೂ ಅಧಿಕ ಎಕರೆ ಪ್ರದೇಶವವನ್ನು ಭೂಸ್ವಾಧೀನ ಮಾಡಿಕೊಡಲು ಪ್ರಯತ್ನ ನಡೆಸಿದೆ. ಸಿದ್ಧತೆಗಳೂ ನಡೆದಿದ್ದವು. ಈಗ ಏಕಾಏಕಿ ಯೋಜನೆ ರದ್ದುಗೊಂಡಿದೆ. ಈ ಪ್ರದೇಶವನ್ನು ರಾಜ್ಯ ಸರ್ಕಾರ ಏನು ಮಾಡಬೇಕು’ ಎಂದು ಪ್ರಶ್ನಿಸಿದರು. ‘ಇವರು ಸಂಸದರಾಗಿ ಆಯ್ಕೆಯಾದ ಬಳಿಕ ಇದೊಂದೇ ಅಲ್ಲ ಮೈಸೂರು ಭಾಗದ ಇನ್ನೂ 5 ಯೋಜನೆಗಳೂ ರದ್ದಾಗಿವೆ. ಇವರು ಸುಳ್ಳು ಹೇಳುವುದನ್ನು ಬಿಟ್ಟು ಬೇರೆ ಕೆಲಸ ಮಾಡಿಲ್ಲ’ ಎಂದು ದೂರಿದರು.

‘ಕೇಂದ್ರ ಸಚಿವ ವಿ.ಸೋಮಣ್ಣ ಅವರೂ ಸಹ ಒಂದು ಯೋಜನೆಯನ್ನೂ ರಾಜ್ಯಕ್ಕೆ ತಂದಿಲ್ಲ. ದಕ್ಷಿಣ ಭಾರತದಲ್ಲೇ ಅತಿ ಕಡಿಮೆ ರೈಲ್ವೆ ಸಂಪರ್ಕ ಇರುವುದು ಕರ್ನಾಟಕದಲ್ಲಿ. ಇಲ್ಲಿನ 80 ತಾಲ್ಲೂಕುಗಳಿಗೆ ಇನ್ನೂ ರೈಲು ಸಂಪರ್ಕ ದೊರೆತಿಲ್ಲ. ಹೀಗಿರುವಾಗ, ಇದ್ದ ಒಂದು ಯೋಜನೆಯನ್ನೂ ರದ್ದು ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲ್ಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ಮನರೇಗಾ) ಕಾಯ್ದೆಯ ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ದಿಂದ ಅನಾನುಕೂಲವಾಗಲಿದೆ. ಈ ಕುರಿತು ಕಾಂಗ್ರೆಸ್‌ ಪಕ್ಷದಿಂದ ಜನಜಾಗೃತಿ ಮೂಡಿಸಲಾಗುವುದು’ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ಎಂ.ನಂದಕುಮಾರ್, ಸುರಯ್ಯ ಅಬ್ರಾರ್, ಸೂರಜ್ ಹೊಸೂರು, ಎಚ್.ಎ.ಹಂಸ ಭಾಗವಹಿಸಿದ್ದರು.

ಶ್ವೇತಪತ್ರ ಹೊರಡಿಸಿ ಚರ್ಚೆಗೆ ಬನ್ನಿ; ಸವಾಲು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಕೊಡಗಿಗೆ ಯಾವ ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಸವಾಲೆಸೆದರು. ‌ಕೊಡಗಿನ ಇಬ್ಬರು ಬಿಜೆಪಿಯ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಬರಲಿ. ನಾವೂ ನಮ್ಮ ಶಾಸಕರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಗೆ ಬರುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.