
ಗೋಣಿಕೊಪ್ಪಲು: ಯರವ ಜನಾಂಗವನ್ನು ಅಲೆಮಾರಿ ಜನಾಂಗದಿಂದ ಕೈಬಿಟ್ಟು, ಹಿಂದೆ ಇದ್ದಂತೆ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಿತಿಮತಿಯಲ್ಲಿ ನಡೆದ ಯರವ ಜನಾಂಗದ ವಿಚಾರ ಸಂಕಿರಣದಲ್ಲಿ ಕೈಗೊಳ್ಳಲಾಯಿತು.
ತಿತಿಮತಿ ಪರಿಶಿಷ್ಟಪಂಗಡ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಭಾನುವಾರ ನಡೆದ ‘ನಾವು ಅಲೆಮಾರಿಗಳೇ ಅಥವಾ ಮೂಲ ನಿವಾಸಿಗಳೇ’ ಎಂಬ ವಿಷಯ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ‘ಯರವ ಜನಾಂಗದವರಾದ ನಾವು ಕೊಡಗಿನ ಮೂಲ ನಿವಾಸಿಗಳು. ನಾವು ಯಾವತ್ತೂ ಅಲೆಮಾರಿಗಳಲ್ಲ. ಕೇರಳದ ವಯನಾಡು, ಮಾನಂದವಾಡಿ, ದಕ್ಷಿಣ ಕೊಡಗಿನ ನಾಗರಹೊಳೆ ಪ್ರದೇಶಗಳೇ ನಮ್ಮ ಸಾಮ್ರಾಜ್ಯಗಳಾಗಿವೆ. ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳದ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮೂಲನಿವಾಸಿಗಳಾದ ನಮ್ಮನ್ನು ಅಲೆಮಾರಿಗಳೆಂದು ಕರೆದು ನಮ್ಮ ಮೂಲ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ’ ಎಂದು ತೀವ್ರ ಆಕ್ರೋಶ ವ್ಕಕ್ತಪಡಿಸಿದರು.
ಬುಡಕಟ್ಟು ಕೃಷಿಕ ಸಂಘದ ಜಿಲ್ಲಾಧ್ಯಕ್ಷ ಯರವರ ಸಿದ್ದಪ್ಪ ಮಾತನಾಡಿ, ರಾಜ್ಯದಲ್ಲಿ 12 ಅಲೆಮಾರಿ ಜನಾಂಗಗಳಿದ್ದು ಅವರೊಂದಿಗೆ ನಮ್ಮನ್ನು ಸೇರಿಸಿದ್ದಾರೆ. ನಮಗಿದ್ದ ಪರಿಶಿಷ್ಟ ಪಂಗಡ ಇಲಾಖೆಯೊಂದಿಗಿನ ಸಂಪರ್ಕವನ್ನು ತೆಗೆದುಹಾಕಿ ಅಲೆಮಾರಿ ನಿಗಮಕ್ಕೆ ಸೇರಿಸಲಾಗಿದೆ. ಇದೀಗ ನಾವು ಯಾವುದೇ ಸೌಲಭ್ಯ ಕೇಳಬೇಕಾದರೆ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿ ಅಲೆಮಾರಿ ಅಭಿವೃದ್ಧಿ ನಿಗಮದೊಂದಿಗೆ ಚರ್ಚಿಸಿ ಸೌಲಭ್ಯ ಪಡೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 12 ಅಲೆಮಾರಿ ಜನಾಂಗಗಳಿದ್ದು ಇವರಿಗೆ ನೀಡುವ ಅನುದಾನವೂ ಕಡಿಮೆ ಇದೆ. ಕೊಡಗಿನ ಮೂಲ ನಿವಾಸಿಗಳಾಗಿರುವ ಮತ್ತು ನೈಜ ಬುಡಕಟ್ಟು ಜನಾಂಗವಾಗಿರುವ ನಮಗೆ ಹೊರಗಿನ ಅಲೆಮಾರಿಗಳೊಂದಿಗೆ ಸೇರಿಸಿ ನಮ್ಮ ಸೌಲಭ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಇದನ್ನು ಕೂಡಲೆ ಕೈಬಿಟ್ಟು ಹಿಂದಿನಂತೆ ಪರಿಶಿಷ್ಟ ಪಂಗಡ ಯರವ ಸಮುದಾಯದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಹಾಗೂ ಯರವ ಸಮುದಾಯದ ಮುಖಂಡರೂ ಆದ ಪಿ.ಆರ್.ಪಂಕಜಾ ಮಾತನಾಡಿ ನೈಜ ಬುಡಕಟ್ಟುಗಳಾದ ಯರವ ಜನಾಂಗವನ್ನು ಆದಿವಾಸಿ ಗುಂಪಿಗೆ ಸೇರಿಸಬೇಕು. ಕೊರಗ ಮತ್ತು ಜೇನುಕರುಬ ಜನಾಂಗವನ್ನು ಆದಿವಾಸಿಗಳೆಂದು ಗುರುತಿಸಿ ಅವರಿಗೆ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಮೂಲಕ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಯರವ ಜನಾಂಗಕ್ಕೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಪೌಷ್ಟಿಕ ಆಹಾರವಾದ ಮೊಟ್ಟೆ ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಇಂಥ ತಾರತಮ್ಯವನ್ನು ಹೋಗಲಾಡಿಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಇದರ ನಡುವೆಯೇ ಇದೀಗ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಯರವ ಜನಾಂಗವನ್ನು ಮತ್ತೆ ಅಲೆಮಾರಿ ಜನಾಂಗಕ್ಕೆ ಸೇರಿಸಿ ಮತ್ತಷ್ಟು ಅನ್ಯಾಯ ಮಾಡಲಾಗಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡದಿದ್ದರೆ ನಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ನೊಂದು ನುಡಿದರು.
ವಕೀಲ ಸುನಿಲ್ ಮಾತನಾಡಿ, ಯರವ ಜನಾಂಗದವರು ಕಾಫಿ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿರುವುದರಿಂದ ಅವರನ್ನು ಅಲೆಮಾರಿಗಳ ಗುಂಪಿಗೆ ಸೇರಿಸಿರುವ ತಪ್ಪು ನಿರ್ಧಾರ ಸಂಭವಿಸಿದೆ. ಸರ್ಕಾರ ಈಗಲಾದರೂ ಸರ್ಕಾರಿ ಜಾಗವನ್ನು ಗುರುತಿಸಿ ಅವರಿಗೆ ಶಾಶ್ವತ ನೆಲೆ ಒದಗಿಸಿಕೊಡಬೇಕು. ಅವರಿಗೆ ಹೊಸದಾಗಿ ಕಟ್ಟಿರುವ ಅಲೆಮಾರಿ ಹಣೆಪಟ್ಟಿಯನ್ನು ತೆಗೆದು ಹಾಕಿ ಮೂಲ ನಿವಾಸಿಗಳಾಗಿ ಗೌರವದಿಂದ ಬದುಕಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಲೇಖಕ ಜೆ.ಸೋಮಣ್ಣ ಯರವ ಜನಾಂಗದ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು. ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮಣಿಕುಂಞಿ, ಕಾರ್ಯಕ್ರಮ ಆಯೋಜಕರೂ ಹಾಗೂ ಯರವ ಜನಾಂಗದ ಮೊದಲ ವಕೀಲರಾದ ಪಿ.ಎನ್.ಚೈತ್ರಾ, ವೈ.ಎನ್.ವಿದ್ಯಾ, ಮುಖಂಡರಾದ ರಮೇಶ್ ಮಾಯಮುಡಿ ಹಾಜರಿದ್ದರು.
ಸಂವಾದದಲ್ಲಿ ಕೇಳಿ ಬಂದದ್ದು
‘ಗುಳಿಗ ಕುಟ್ಟತಮ್ಮ ದೇವರು ಬಿಡಬಾರದು’ ಮೊದಲು ನಾವು ಸೌಲಭ್ಯ ಕೇಳಲು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗೆ ಹೋಗುತ್ತಿದ್ದೆವು. ಇದೀಗ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೋಗಬೇಕಾಗಿದೆ. ಯವರ ಜನಾಂಗದವರು ತಮ್ಮ ಮೂಲ ಸಂಸ್ಕೃತಿ ಪದ್ಧತಿ ಪರಂಪರೆಗಳನ್ನು ಬಿಟ್ಟು ವೈದಿಕ ಸಂಸ್ಕೃತಿಯತ್ತ ವಾಲುತ್ತಿರುವುದರಿಂದ ಇಂಥ ಅನ್ಯಾಯಗಳಾಗುತ್ತಿವೆ. ನಮ್ಮ ದೇವರುಗಳಾದ ಗುಳಿಗ ಕುಟ್ಟತಮ್ಮ ಗದ್ದೆಯಲ್ಲಿ ಭತ್ತದ ಪೂಜೆ ಇವುಗಳನ್ನು ಬಿಡದಂತೆ ಆಚರಿಸಿಕೊಂಡು ಬರಬೇಕು. ಇದರ ಮೇಲೆ ನಮ್ಮ ಬದುಕು ಮತ್ತು ಸರ್ಕಾರದ ಸವಲತ್ತುಗಳು ನಿಂತಿದೆ. -ಯರವರ ಉದಯ್ ಮುತ್ತಪ್ಪ ಬೊಂಬುಹಾಡಿ ‘ಪಿಎಚ್.ಡಿ ಮಾಡುವವರಿಂದ ಅನ್ಯಾಯ’ ಹಾಡಿಗಳಿಗೆ ಬಂದು ಪಿಎಚ್.ಡಿ ಮತ್ತು ಪುಸ್ತಕ ಬರೆಯುವವರಿಂದ ನಮ್ಮ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿಗಳು ಹೋಗುತ್ತಿವೆ. ಸರಿಯಾಗಿ ಅಧ್ಯಯನ ಮಾಡದೆ ಎಲ್ಲೋ ಕುಳಿತು ಪುಸ್ತಕ ರಚಿಸಿದುದನ್ನೆ ಸತ್ಯವೆಂದು ತಿಳಿದ ಇಲಾಖೆಗಳ ಅಧಿಕಾರಿಗಳು ನಮ್ಮ ಮೂಲ ಸಂಸ್ಕೃತಿ ಮತ್ತು ಬದುಕಿಗೆ ಕೊಳ್ಳಿ ಇಡುತ್ತಿದ್ದಾರೆ. -ಯರವರ ಪುಷ್ಪ ನಾಗರಹೊಳೆ ಗಿರಿಜನ ಹಾಡಿ ಜಾತಿ ಪ್ರಮಾಣಕ್ಕೂ ಗೊಂದಲ ಯರವ ಜನಾಂಗವನ್ನು ಅಲೆಮಾರಿ ಜನಾಂಗಕ್ಕೆ ಸೇರಿಸಿರುವುದರಿಂದ ಜಾತಿ ಪ್ರಮಾಣಕ್ಕೂ ಗೊಂದಲವಾಗಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಿ ನ್ಯಾಯ ಕಂಡುಕೊಳ್ಳಬೇಕು. -ರಾಮು ಅರಣ್ಯ ಹಕ್ಕುಸಮಿತಿ ಅಧ್ಯಕ್ಷ ಚೇಣಿಹಡ್ಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.