ಕುಶಾಲನಗರ: ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲೆಯ ಎನ್‌ಎಸ್‌ಎಸ್ ಘಟಕ, ಭಾರತ್ ಸ್ಕೌಟ್ಸ್, ಗೈಡ್ಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ‘ಒಂದು ಭೂಮಿಗೆ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಮಾರ್ಗದರ್ಶನದಲ್ಲಿ ವಿವಿಧ ಪ್ರಾಣಾಯಾಮದೊಂದಿಗೆ ವಿವಿಧ ಭಂಗಿಗಳ ಆಸನಗಳ ಮೂಲಕ ಯೋಗ ಪ್ರದರ್ಶಿಸಿ ಗಮನ ಸೆಳೆದರು. ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಯೋಗ ದಿನದ ಮಹತ್ವ ಕುರಿತು ಮಾತನಾಡಿ, ಯೋಗವು ನಮ್ಮ ಮನಸ್ಸು, ದೇಹ ಸಂಪರ್ಕಿಸುವ ಮೂಲಕ ದೈಹಿಕ, ಮಾನಸಿಕ ಆರೋಗ್ಯ ದೃಢತೆಗೆ ಸಹಕಾರಿಯಾಗುತ್ತದೆ ಎಂದರು.
ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ ಮಾತನಾಡಿ, ಯೋಗ ಎನ್ನುವುದು ಬರಿಯ ಆಸನ, ಪ್ರಾಣಾಯಾಮ ಧ್ಯಾನವಷ್ಟೇ ಅಲ್ಲ; ಅದೊಂದು ಬದುಕಿನ ಮಾರ್ಗ. ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಹಿಂದಿ ಭಾಷಾ ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್ ಮಾತನಾಡಿ, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದರು.
ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ , ಯೋಗಾಭ್ಯಾಸದಿಂದ ಉಂಟಾಗುವ ಅನುಕೂಲಗಳ ಕುರಿತು ವಿವರಿಸಿದರು.
ಉತ್ತಮವಾಗಿ ಯೋಗ ಪ್ರದರ್ಶಿಸಿದ ಕೀರ್ತನ, ರಂಜಿತ ಹಾಗೂ ರಶ್ಮಿಕ ಅವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.