ADVERTISEMENT

ಉತ್ತಮ ಆರೋಗ್ಯಕ್ಕಾಗಿ ಯೋಗ: ಪರಮೇಶ್ ಕುಮಾರ್

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಯೋಗ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 3:54 IST
Last Updated 23 ಜೂನ್ 2025, 3:54 IST
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಉದ್ಘಾಟಿಸಿದರು
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಉದ್ಘಾಟಿಸಿದರು   

ಸೋಮವಾರಪೇಟೆ: ಪ್ರತಿಯೊಬ್ಬರೂ ಪ್ರತಿ ನಿತ್ಯ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಪುರಾತನ ಪದ್ಧತಿಗಳಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಯೋಗವನ್ನು ಇಂದು ವಿದೇಶಿಗರು ಹೆಚ್ಚು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಭಾರತೀಯರು ಅದರ ಮಹತ್ವ ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಯೋಗವು ಮನಸ್ಸು, ದೇಹ, ಉಸಿರಿನ ಹೊಂದಾಣಿಕೆಯಾಗಿದೆ. ಇದರ ಅಭ್ಯಾಸದಿಂದ ಜೀವನ ಸುಗಮವಾಗುತ್ತದೆ ಎಂದರು.

ಯೋಗಕ್ಕೆ ಇಂದು ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೋಗ, ಪ್ರಾಣಾಯಾಮಗಳು ಎಲ್ಲಾ ವಯೋಮಾನದವರಿಗೂ ಒಗ್ಗುವ ವಿಧವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸುಸ್ಥಿತಿಗಾಗಿ ನಿಯಮಿತ ಅಭ್ಯಾಸದಲ್ಲಿ ತೊಡಗಬೇಕೆಂದು ಕಿವಿಮಾತು ಹೇಳಿದರು.

ADVERTISEMENT

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ವಿವಿಧ ಆಸನಗಳು, ಪ್ರಾಣಾಯಾಮದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯಿಂದ ಪ್ರತಿನಿತ್ಯ ಯೋಗಾಭ್ಯಾಸ, ಆನಂದೋತ್ಸವ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಯೋಗದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ ಕುಮಾರ್, ತಾಲ್ಲೂಕು ಅಕ್ರಮ–ಸಕ್ರಮ ಸಮಿತಿ ಸದಸ್ಯೆ ಚಂದ್ರಿಕಾ ಕುಮಾರ್, ಸಿ.ಕೆ. ಆರ್ಮಿ ಟ್ರೈನಿಂಗ್ ಅಕಾಡೆಮಿ ಸಂಸ್ಥಾಪಕ ಚಂದ್ರಕುಮಾರ್, ಕುಲದೀಪ್ ಏಜೆನ್ಸಿಯ ಮಾಲೀಕರಾದ ಅಕ್ಷತಾ ಉಪಸ್ಥಿತರಿದ್ದರು.

ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಯೋಗ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.