ADVERTISEMENT

ಮಡಿಕೇರಿ | ಯೋಗ ಪ್ರದರ್ಶನ: ಮತ್ತೆ ಮೂರು ದಾಖಲೆಗೆ ಸಿಂಚನಾ ಸಜ್ಜು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:13 IST
Last Updated 26 ಅಕ್ಟೋಬರ್ 2025, 4:13 IST
ಬಾಲಕಿ ಸಿಂಚನಾ ಈ ಹಿಂದೆ ಉರಬ್ರಾಸನದಲ್ಲಿ 1 ನಿಮಿಷ 4 ಸೆಕೆಂಡ್‌ಗಳ ಕಾಲ ಇರುವ ವಿಶ್ವದಲ್ಲೇ ಅತಿ ಹೆಚ್ಚು ಕಾಲ ಉರಬ್ರಾಸನದಲ್ಲಿರುವ ದಾಖಲೆ ನಿರ್ಮಿಸಿದ್ದಳು
ಬಾಲಕಿ ಸಿಂಚನಾ ಈ ಹಿಂದೆ ಉರಬ್ರಾಸನದಲ್ಲಿ 1 ನಿಮಿಷ 4 ಸೆಕೆಂಡ್‌ಗಳ ಕಾಲ ಇರುವ ವಿಶ್ವದಲ್ಲೇ ಅತಿ ಹೆಚ್ಚು ಕಾಲ ಉರಬ್ರಾಸನದಲ್ಲಿರುವ ದಾಖಲೆ ನಿರ್ಮಿಸಿದ್ದಳು   

ಮಡಿಕೇರಿ: ಕೊಡಗಿನ ಯೋಗಪಟು ಬಾಲಕಿ ಸಿಂಚನಾ ಮತ್ತೆ ಮೂರು ವಿಶ್ವ ದಾಖಲೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಅ. 28ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕಿನ ಮದೆನಾಡು ಗ್ರಾಮದ ಬಿಜಿಎಸ್ ಸಭಾಂಗಣದಲ್ಲಿ ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ನಡೆಯಲಿದೆ.

‘ಮದೆ ಗ್ರಾಮದ ಬಿಜಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಯೋಗದಲ್ಲಿ 7 ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈಗ 3 ವಿಶ್ವ ದಾಖಲೆ ನಿರ್ಮಿಸಲಿದ್ದಾಳೆ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಮತ್ತು ಕೊಡಗು ಜಿಲ್ಲೆಯ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ.ಮನೀಷ್ ವೈಶ್ನೋಯಿ, ಶಾಸಕ ಡಾ.ಮಂತರ್‌ಗೌಡ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಈ ಪುಟ್ಟ ಬಾಲಕಿ ಗ್ರಾಮದಲ್ಲಿಯೇ ಇದ್ದು, ಗ್ರಾಮದಲ್ಲೆ ಬೆಳೆದು ವಿಶ್ವದಾಖಲೆ ನಿರ್ಮಿಸುವ ಮೂಲಕ ಸೋಜಿಗ ಮೂಡಿಸಿದ್ದಾಳೆ ಎಂದು ಶ್ಲಾಘಿಸಿದರು.

ಯೋಗ ಶಿಕ್ಷಕ ಕೆ.ಕೆ.ಮಹೇಶ್‌ಕುಮಾರ್ ಮಾತನಾಡಿ, ‘ಬಾಲಕಿ ಸಿಂಚನಾ ಯೋಗ ಕ್ಷೇತ್ರದಲ್ಲೆ ವಿಶೇಷ ಪ್ರತಿಭೆ. ಹೊರಗೆಯೂ ಅನೇಕ ಪ್ರದರ್ಶನ ನೀಡಿದ್ದಾಳೆ. ಅನೇಕ ಗೌರವಗಳಿಗೂ ‍ಪಾತ್ರಳಾಗಿದ್ದಾಳೆ’ ಎಂದು ಹೇಳಿದರು.

ಬಾಲಕಿ ಸಿಂಚನಾ, ತಂದೆ ಕೀರ್ತಿಕುಮಾರ್, ಶಾಲಾ ಆಡಳಿತಾಧಿಕಾರಿ ಸುಧಾಕರ್ ಭಾಗವಹಿಸಿದ್ದರು.

ಇದುವರೆಗಿನ ದಾಖಲೆಗಳು: ಚಕ್ರಾಸನದ ಸ್ಥಿತಿಯಲ್ಲಿ ನಿಮಿಷಕ್ಕೆ 10 ಬಾರಿ ಸುತ್ತುವುದು, ಇದೇ ದಾಖಲೆಯನ್ನು ಮುರಿದು 25 ಬಾರಿ ಸುತ್ತುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದಳು. ನಿರಲಂಭ ಪೂರ್ಣ ಚಕ್ರಾಸನವನ್ನು ನಿಮಿಷಕ್ಕೆ 10 ಬಾರಿ ಮಾಡುವುದು, ಡಿಂಬಾಸನದ ಸ್ಥಿತಿಯಲ್ಲಿ ನಿಮಿಷಕ್ಕೆ 10 ಮೀಟರ್‌ ನಡೆಯುವುದು, ಇದೇ ದಾಖಲೆಯನ್ನು ಮುರಿದು ನಿಮಿಷಕ್ಕೆ 15 ಮೀಟರ್‌ ನಡೆಯುವ ಮೂಲಕ ದಾಖಲೆ ನಿರ್ಮಿಸಿದಳು. ಮೃಗ ಮುಖಾಸನದ ಸ್ಥಿತಿಯಲ್ಲೇ 1 ನಿಮಿಷ 54 ಸೆಕೆಂಡ್‌ಗಳ ಇರುವುದು, ಉರಭ್ರಾಸನದ ಸ್ಥಿತಿಯಲ್ಲಿ 1 ನಿಮಿಷ ಇರುವುದು, ಡಿಂಬಾಸನದ ಸ್ಥಿತಿಯಲ್ಲಿ 30 ನಿಮಿಷ 5 ಸೆಕೆಂಡ್‌ಗಳ ಇರುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.

ಬಾಲಕಿ ಸಿಂಚನಾ ತಾಯಿ ರೇಣುಕಾ ಹಾಗೂ ತಂದೆ ಕೀರ್ತಿಕುಮಾರ್

ನಿರ್ಮಿಸಲಿರುವ ದಾಖಲೆಗಳು

ಖಂಡಪೀಡಾಸನದ ಸ್ಥಿತಿಯಲ್ಲಿ ಒಂದು ನಿಮಿಷ ಇರುವುದು ಧನುರಾಸನ ಸ್ಥಿತಿಯಲ್ಲಿ 1 ನಿಮಿಷದಲ್ಲಿ 15 ಬಾರಿ ಸುತ್ತುವುದು ಹಾಗೂ ಡಿಂಬಾಸನ ಸ್ಥಿತಿಯಲ್ಲಿ 1 ನಿಮಿಷಕ್ಕೆ 10 ಬಾರಿ ಸುತ್ತುವುದು ಈ ದಾಖಲೆಗಳನ್ನು ಪುತ್ರಿ ಸಿಂಚನಾ ನಿರ್ಮಿಸಲಿದ್ದಾಳೆ ಎಂದು ಸಿಂಚನಾಳ ತಾಯಿ ರೇಣುಕಾ ತಿಳಿಸಿದರು. ಇದುವರೆಗೂ 9 ದಾಖಲೆಗಳನ್ನು ನಿರ್ಮಿಸಿರುವ ಸಿಂಚನಾ ಅದರಲ್ಲಿ 7 ವಿಶ್ವದಾಖಲೆಯಾಗಿದ್ದು ಇನ್ನೆರಡು ರಾಜ್ಯ ಮತ್ತು ರಾಷ್ಟ್ರಮಟ್ಟದ್ದಾಗಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.