
ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಬುಧವಾರ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಪ್ಪ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಕಾಲೇಜಿನ ಎನ್‌ಸಿಸಿ ಘಟಕದಿಂದ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಕಾಳಿಮಾಡ ಶಿವಪ್ಪ ಮಾತನಾಡಿ, ‘ಕಾವೇರಿ ಮಣ್ಣಿನಲ್ಲಿ ಜನಿಸಿದ ಕಾರ್ಯಪ್ಪ ಅವರು ಭಾರತೀಯ ಸೇನೆಯ ಪ್ರಥಮ ಮಹಾದಂಡ ನಾಯಕರಾಗಿದ್ದು, ಕೊಡಗಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಭಾರತೀಯ ಸೇನೆಯಲ್ಲಿ ಶಿಸ್ತು ಮೂಡಿಸಿ ಮಾತೃಭಕ್ತಿ, ಪಿತೃ ಭಕ್ತಿ, ಗುರುಭಕ್ತಿ, ದೇಶಭಕ್ತಿ, ದೈವಭಕ್ತಿಯ ಜೊತೆಗೆ ಸಮಯಪಾಲನೆಗೆ ಮಹತ್ವ ನೀಡಿದ್ದರು. ಇಂದಿನ ಯುವ ಪೀಳಿಗೆ ಕಾರ್ಯಪ್ಪ ನವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಿಯಪ್ಪ ಮಾತನಾಡಿ, ‘ಅಪ್ರತಿಮ ದೇಶಪ್ರೇಮಿಯಾಗಿದ್ದ ಕಾರ್ಯಪ್ಪನವರ ಬದುಕಿನ ರೀತಿ ಇಂದಿನ ಯುವಕರಿಗೆ ದಾರಿದೀಪವಾಗಿದೆ. ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ದೇಶವನ್ನು, ದೇಶದ ಸೈನಿಕರನ್ನು ಪ್ರೀತಿಸುತಿದ್ದ ಅವರ ನಡೆ ನುಡಿ, ಕಾರ್ಯಕ್ಷಮತೆ ಆದರ್ಶನೀಯವಾದುದು. ಯುವಕರು ಹೆಚ್ಚಾಗಿ ಸೈನ್ಯಕ್ಕೆ ಸೇರುವ ಮೂಲಕ ದೇಶಸೇವೆಯಲ್ಲಿ ತೊಡಗಿಸಿಕೊಂಡು ಕಾರ್ಯಪ್ಪ ಹಾದಿಯಲ್ಲಿ ನಡೆಯುವಂತಾಗಲಿ’ ಎಂದು ಆಶಿಸಿದರು.
ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ‘ವಿದ್ಯಾರ್ಥಿಗಳು ಕಾರ್ಯಪ್ಪ ಅವರ ಜೀವನ ಚರಿತ್ರೆಯನ್ನು ಓದುವ ಮೂಲಕ, ಶಿಸ್ತುಬದ್ಧ ಜೀವನ ರೂಪಿಸಿಕೊಂಡು, ಉತ್ತಮ ನಾಗರೀಕರಾಗಿ ಬದುಕು ಕಟ್ಟಿಕೊಳ್ಳಬೇಕು’ ಎಂದರು.
ನಿವೃತ್ತ ಸೈನಿಕರಾದ ಬೊಟ್ಟಂಗಡ ಜಪ್ಪು, ಟಾಟಾ ಕಾಫಿ ಮ್ಯಾನೇಜರ್ ಚೆಪ್ಪುಡಿರ ಅಯ್ಯಪ್ಪ, ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್.ಆಕ್ರಂ, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಕ್ಯಾಂಪಸ್ ಮ್ಯಾನೇಜರ್ ಮಿನ್ನಂಡ ಜೋಯಪ್ಪ, ಸಿಬ್ಬಂದಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.