ADVERTISEMENT

ಅಕ್ಕಮಹಾದೇವಿ ವಿ.ವಿ ಜತೆ ಮಹಿಳಾ ಕಾಲೇಜು ವಿಲೀನ

ಸರ್ಕಾರದ ಕ್ರಮಕ್ಕೆ ವಿದ್ಯಾರ್ಥಿಗಳು– ಪೋಷಕರ ಆಕ್ರೋಶ; ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ವಿಜಯಪುರಕ್ಕೆ ಅಲೆಯುವ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:02 IST
Last Updated 29 ಏಪ್ರಿಲ್ 2018, 13:02 IST
ಕೋಲಾರ ಸರ್ಕಾರಿ ಮಹಿಳಾ ಕಾಲೇಜಿನ ಹೊರನೋಟ
ಕೋಲಾರ ಸರ್ಕಾರಿ ಮಹಿಳಾ ಕಾಲೇಜಿನ ಹೊರನೋಟ   

ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜನ್ನು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಲಾಗಿದ್ದು, ಸರ್ಕಾರದ ಈ ಕ್ರಮಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾಲೇಜನ್ನು ಅಕ್ಕಮಹಾದೇವಿ ಮಹಿಳಾ ವಿ.ವಿ ಜತೆ ವಿಲೀನಗೊಳಿಸಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾ.15ರಂದು ಆದೇಶ ಹೊರಡಿಸಿದ್ದಾರೆ. ಕಾಲೇಜಿನಲ್ಲಿ 3,200 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಮಹಿಳಾ ವಿ.ವಿಗೆ ಸೇರ್ಪಡೆಯಾದರೆ ವಿದ್ಯಾರ್ಥಿನಿಯರು ಅಂಕಪಟ್ಟಿ ಸೇರಿದಂತೆ ಎಲ್ಲ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ವಿಜಯಪುರಕ್ಕೆ ಅಲೆಯುವ ಪರಿಸ್ಥಿತಿ ಎದುರಾಗುತ್ತದೆ.

ಪ್ರಧಾನ ಕಾರ್ಯದರ್ಶಿಯು ಬೆಂಗಳೂರು ವಿ.ವಿ ಸೇರಿದಂತೆ ರಾಜ್ಯದ 6 ವಿ.ವಿಗಳಿಗೆ ಸುತ್ತೋಲೆ ಕಳುಹಿಸಿ, ತಮ್ಮ ವ್ಯಾಪ್ತಿಯ ಮಹಿಳಾ ಕಾಲೇಜುಗಳ ಸಂಯೋಜನೆ ರದ್ದುಗೊಳಿಸಿ ಅಕ್ಕಮಹಾದೇವಿ ಮಹಿಳಾ ವಿ.ವಿ ಜತೆ ಸಂಯೋಜನೆ ಮಾಡುವಂತೆ ಆಯಾ ಪ್ರಾಂಶುಪಾಲರಿಗೆ ಆದೇಶ ನೀಡಬೇಕೆಂದು ಸೂಚಿಸಿದ್ದಾರೆ.

ADVERTISEMENT

2016ರ ಜೂನ್‌ನಲ್ಲಿ ಕೋಲಾರ ಮಹಿಳಾ ಕಾಲೇಜನ್ನು ಮಹಿಳಾ ವಿ.ವಿಗೆ ಸೇರಿಸುವ ನಿರ್ಧಾರ ಪ್ರಕಟಗೊಂಡಾಗ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರಿಂದ ತೀವ್ರ ಪ್ರತಿರೋಧ ಎದುರಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್‌ ಈ ನಿರ್ಧಾರ ಕೈಬಿಡುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು. ಆದರೆ, ಇಲಾಖೆಯು ಸುತ್ತೋಲೆ ಹೊರಡಿಸಿ ಆ ಸಂಗತಿಯನ್ನು ಗೋಪ್ಯವಾಗಿಟ್ಟು ಚುನಾವಣಾ ನೀತಿಸಂಹಿತೆ ಜಾರಿಯಾದ ನಂತರ ಬಿಡುಗಡೆ ಮಾಡಿದೆ.

ಯಾವ ವಿ.ವಿಗಳು: ಪ್ರಧಾನ ಕಾರ್ಯದರ್ಶಿ ಆದೇಶದಲ್ಲಿ ಬೆಂಗಳೂರು ವಿ.ವಿ, ಬೆಂಗಳೂರು ಕೇಂದ್ರಿಯ ವಿ.ವಿ, ಮೈಸೂರು ವಿ.ವಿ, ಕುವೆಂಪು ವಿ.ವಿ, ಮಂಗಳೂರು ಮತ್ತು ದಾವಣಗೆರೆ ವಿ.ವಿಗಳ ವ್ಯಾಪ್ತಿಯ ಮಹಿಳಾ ಕಾಲೇಜುಗಳನ್ನು ಮಹಿಳಾ ವಿ.ವಿಗೆ ಸೇರ್ಪಡೆ ಮಾಡಲು ಸೂಚಿಸುವಂತೆ ತಿಳಿಸಲಾಗಿದೆ.

ಆ ಆದೇಶದ ಪಟ್ಟಿಯಲ್ಲಿರುವ ಬೆಂಗಳೂರಿನ ಮಹಾರಾಣಿ ಕಾಲೇಜು, ಮೈಸೂರಿನ ಮಹಾರಾಣಿ ಕಾಲೇಜನ್ನು ಕೈಬಿಡುವಂತೆ ಮಾಡುವಲ್ಲಿ ಆ ಭಾಗದ ಜನಪ್ರತಿನಿಧಿಗಳು ಯಶ ಕಂಡಿದ್ದಾರೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟದ ಎಚ್ಚರಿಕೆ: ಕಾಲೇಜನ್ನು ಮಹಿಳಾ ವಿ.ವಿಗೆ ಸೇರ್ಪಡೆ ಮಾಡಲು ವಿದ್ಯಾರ್ಥಿನಿಯರು ಮತ್ತು ಪೋಷಕರ ವಿರೋಧವಿದ್ದು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

‘ಚುನಾವಣೆ ನಂತರ ಹೊಸ ಸರ್ಕಾರ ರಚನೆಯಾದ ಬಳಿಕ ಕಾಲೇಜನ್ನು ಮಹಿಳಾ ವಿ.ವಿಗೆ ಸೇರ್ಪಡೆಗೊಳಿಸುವ ಸಂಬಂಧ ಮರು ಪರಿಶೀಲನೆ ಮಾಡುತ್ತದೆ. ಆವರೆಗೆ ಸೇರ್ಪಡೆ ಮಾಡದೆ ಅವಕಾಶ ಕೊಡಿ’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಮರೆಡ್ಡಿ ಬೆಂಗಳೂರು ವಿ.ವಿ ಕುಲಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಕುಲಸಚಿವರು ಏ.30ರಂದು ಪ್ರಾಂಶುಪಾಲರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಹಿಳಾ ಕಾಲೇಜನ್ನು ದೂರದ ಮಹಿಳಾ ವಿ.ವಿಗೆ ಸೇರಿಸುವ ನಿರ್ಧಾರ ಕೈಗೊಂಡರೆ ಮಕ್ಕಳ ಗತಿ ಏನು ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ.

ಅನ್ವಯವಾಗುವುದಿಲ್ಲ: ಸರ್ಕಾರದ ಗೆಜೆಟ್ ಪ್ರಕಟಣೆಯಂತೆ ಸರ್ಕಾರಿ ಮಹಿಳಾ ಕಾಲೇಜುಗಳನ್ನು ಕಡ್ಡಾಯವಾಗಿ ಮಹಿಳಾ ವಿ.ವಿಗೆ ಸೇರ್ಪಡೆ ಮಾಡಬೇಕು. ಆದರೆ, ಖಾಸಗಿ ಕಾಲೇಜುಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಆಡಳಿತ ಮಂಡಳಿಗಳಿಗೆ ಇಷ್ಟವಿದ್ದರೆ ಕಾಲೇಜನ್ನು ಮಹಿಳಾ ವಿ.ವಿ ಜತೆ ವಿಲೀನಗೊಳಿಸಬಹುದು.

ಜಿಲ್ಲೆಯ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದಿರುವ ಕೋಲಾರ ಸರ್ಕಾರಿ ಮಹಿಳಾ ಕಾಲೇಜಿಗೆ ಮೂರ್ನಾಲ್ಕು ವರ್ಷಗಳಿಂದ ರ‍್ಯಾಂಕ್‌ಗಳ ಸುರಿ ಮಳೆಯಾಗುತ್ತಿದೆ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿದಿದ್ದು, ಆಡಳಿತ ಮಂಡಳಿಗಳಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿದೆ.

ಈ ಕಾಲೇಜು ಗ್ರಾಮೀಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಆಸರೆಯಾಗಿದೆ. ಸರ್ಕಾರವು ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಲಾಬಿಗೆ ಮಣಿದು ಈ ಕಾಲೇಜನ್ನು ಮಹಿಳಾ ವಿ.ವಿಗೆ ಸೇರಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

**
ಬೆಂಗಳೂರು ವಿ.ವಿ ಕುಲಸಚಿವರು ಹಿಂದಿನ ವಾರ ಕರೆದಿದ್ದ ಸಭೆಯಲ್ಲಿ ಕೋಲಾರದ ಮಹಿಳಾ ಕಾಲೇಜನ್ನು ಮಹಿಳಾ ವಿ.ವಿಗೆ ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ, ವಿದ್ಯಾರ್ಥಿಗಳು, ಪೋಷಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದೇನೆ
– ಪ್ರೊ.ಜಯರಾಮರೆಡ್ಡಿ, ಪ್ರಾಂಶುಪಾಲರು, ಕೋಲಾರ ಸರ್ಕಾರಿ ಮಹಿಳಾ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.