ADVERTISEMENT

ಅಡುಗೆ ಅನಿಲ ಸಿಲಿಂಡರ್‌ಗಾಗಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 8:05 IST
Last Updated 24 ಜನವರಿ 2012, 8:05 IST

ಕೋಲಾರ: ಅಡುಗೆ ಅನಿಲ ಸಿಲಿಂಡರ್ ಪೂರೈಸಬೇಕು ಎಂದು ಆಗ್ರಹಿಸಿ ನಗರದ ಬಂಗಾರಪೇಟೆ ವೃತ್ತದಲ್ಲಿ ಸೋಮವಾರ ಗ್ರಾಹಕರು ಸಿಲಿಂಡರ್‌ಗಳನ್ನು ಅಡ್ಡ ಇಟ್ಟು ರಸ್ತೆ ತಡೆ ನಡೆಸಿದರು.

ಹಲವು ದಿನಗಳಿಂದ ಸಿಲಿಂಡರ್ ಪೂರೈಸದಿರುವುದರಿಂದ ಪರದಾಡುವಂತಾಗಿದೆ. ನಿತ್ಯವೂ ಬೆಳಕಾಗುವ ಮುನ್ನವೇ ಬಂದು ಸಾಲಿನಲ್ಲಿ ನಿಂತರೂ ಸಿಲಿಂಡರ್ ದೊರಕುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಗ್ರಾಹಕರು ಕೇದಾರ್ ಗ್ಯಾಸ್ ಏಜೆನ್ಸಿ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ರಸ್ತೆಗೆ ಅಡ್ಡವಾಗಿ ಸಿಲಿಂಡರ್ ಜೋಡಿಸಿದ ಗ್ರಾಹಕರು ಅಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದರು.

ನಂತರ ಸ್ಥಳಕ್ಕೆ ಬಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಕೆ.ಶ್ರೀನಿವಾಸ್ ಪ್ರತಿಭಟನೆಕಾರರ ಅಹವಾಲು ಆಲಿಸಿದರು. ಸಿಲಿಂಡರ್ ಸಾಗಣೆ ವಾಹನಗಳ ಮುಷ್ಕರದಿಂದ ಸಮಸ್ಯೆ ಏರ್ಪಟ್ಟಿದೆ.

ಮುಷ್ಕರ ಕೊನೆಗೊಂಡಿರುವುದರಿಂದ ಕೆಲವೇ ದಿನದಲ್ಲಿ ಸಮಸ್ಯೆ ಬಗೆಹರಿಸಯಲಿದೆ. ಸಮಸ್ಯೆ ಶೀಘ್ರ ಪರಿಹಾರವಾಗುವ ನಿಟ್ಟಿನಲ್ಲಿ ಇಲಾಖೆಯೂ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು. ನಂತರ ಗ್ರಾಹಕರು ಪ್ರತಿಭಟನೆ ನಿಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.