ADVERTISEMENT

ಅನಿಷ್ಟ ಪದ್ಧತಿ ಗುಪ್ತಗಾಮಿನಿ

ಮಾಲೂರು: ತಾಲ್ಲೂಕು ಮಟ್ಟದಲ್ಲಿ ಹಲವು ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 12:17 IST
Last Updated 12 ಜೂನ್ 2018, 12:17 IST

‌ಮಾಲೂರು: ತಾಲ್ಲೂಕಿನಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. ಕಾರ್ಮಿಕ ಇಲಾಖೆಯು ಇತ್ತೀಚೆಗೆ ಕೆಲವು ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವುದೇ ಇದಕ್ಕೆ ಸಾಕ್ಷಿ.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆಗಳು ಹೆಚ್ಚಿವೆ. ಸಾವಿರಾರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಟ್ಟಿಗೆ ತಯಾರಿಕೆಗೆ ಅಗತ್ಯವಿರುವ ಕಾರ್ಮಿಕರನ್ನು ಪಕ್ಕದ ತಮಿಳುನಾಡು ಮತ್ತು ಒಡಿಶಾದಿಂದ ಕರೆತರಲಾಗುತ್ತದೆ. ಕಾರ್ಮಿಕರು ಕುಟುಂಬ ಸಮೇತ ಬಂದು ಮಾಲೀಕರು ನೀಡುವ ಮನೆಗಳಲ್ಲಿ ವಾಸಿಸುವರು. ಇಟ್ಟಿಗೆ ತಯಾರಿಕೆಯಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ದುಡಿಯುವರು. ಆಗ ಆ ಕುಟುಂಬಗಳ ಮಕ್ಕಳೂ ಸಹ ಕೆಲಸದಲ್ಲಿ ತೊಡಗುವರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ 4 ದೂರು ದಾಖಲಾಗಿವೆ. ಪಟ್ಟಣದಲ್ಲಿನ 2 ಅಂಗಡಿಗಳಲ್ಲಿ ಬಾಲಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಕ್ಕೂರು ಮತ್ತು ನಾರಾಯಣ ಕೆರೆ ಗ್ರಾಮಗಳ ಇಟ್ಟಿಗೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ 2 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೀಗೆ ತಾಲ್ಲೂಕಿನ ಇಟ್ಟಿಗೆ ಕಾರ್ಖಾನೆಗಳಲ್ಲಿ ಮಕ್ಕಳಿಂದ ದುಡಿಸಿಕೊಳ್ಳಲಾಗುತ್ತಿದೆ.

ADVERTISEMENT

ತಾಲ್ಲೂಕು ಮಟ್ಟದಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ. ಮಕ್ಕಳಿಂದ ದುಡಿಸಿಕೊಳ್ಳುವವರ ವಿರುದ್ಧ‌ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಟೇಕಲ್ ಹೋಬಳಿ ವ್ಯಾಪ್ತಿಯಲ್ಲಿ ಸಿಡಿಪಿಒ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಕೆಲಸ ನಿರ್ವಹಿಸುತ್ತಿದೆ. ಮಾಸ್ತಿ ತಂಡಕ್ಕೆ ಬಿಇಒ ಮುಖ್ಯಸ್ಥರಾಗಿದ್ದಾರೆ. ಲಕ್ಕೂರು ಹೋಬಳಿಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ನೇತೃತ್ವದಲ್ಲಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಬಡತನ, ಶಿಕ್ಷಣದ ಕೊರತೆ, ಆರ್ಥಿಕ ಸ್ಥಿತಿ, ಪಾಲಕರ ಅಜ್ಞಾನ , ಮಕ್ಕಳ ಬಗೆಗಿನ ತಾತ್ಸಾರ ಮನೋಭಾವದ ಕಾರಣ ಮಕ್ಕಳನ್ನು ದುಡಿಮೆಗೆ ಹಚ್ಚಲಾಗುತ್ತಿದೆ.

ಪ್ರಕರಣ ದಾಖಲು; ಎಚ್ಚರಿಕೆ

‌ಮಕ್ಕಳು ತಮ್ಮ ಬಾಲ್ಯ ಅನುಭವಿಸಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಾರ್ಮಿಕ ಇಲಾಖೆಯಿಂದ ಪ್ರಕರಣ ದಾಖಲಿಸಲಾಗುತ್ತದೆ. ನಾಗರಿಕರು ಮಕ್ಕಳನ್ನು ದುಡಿಮೆಗೆ ಬಳಸಬಾರದು ಎಂದು ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕ ಲೋಕೇಶ್ ತಿಳಿಸಿದರು.

–ವಿ.ರಾಜಗೋಪಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.