ADVERTISEMENT

ಅವಾಚ್ಯ ಶಬ್ದ ನಿಂದನೆ: ಪರಸ್ಪರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 8:10 IST
Last Updated 24 ಫೆಬ್ರುವರಿ 2012, 8:10 IST

ಕೋಲಾರ: ಅವಾಚ್ಯ ಶಬ್ದಗಳಿಂದ ನಿಂದಿಸಿದರು, ಕೊಲೆ ಬೆದರಿಕೆ ಹಾಕಿದರು ಎಂದು ಪರಸ್ಪರ ಆರೋಪಿಸಿ ನಗರಸಭೆ ಆಯುಕ್ತೆ ಆರ್.ಶಾಲಿನಿ ಮತ್ತು 3ನೇ ವಾರ್ಡ್‌ನ ಸದಸ್ಯ ಸೋಮಶೇಖರ್ ಪ್ರತ್ಯೇಕವಾಗಿ ಧರಣಿ ನಡೆಸಿದ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

ಈ ಸಂಬಂಧ  ಜಿಲ್ಲಾಧಿಕಾರಿಗೆ ಆಯುಕ್ತೆ ದೂರು ನೀಡಿದ್ದರೆ, ಸೋಮಶೇಖರ್ ನಗರದ ಗಲ್‌ಪೇಟೆ ಠಾಣೆ ಮುಂದೆ ಧರಣಿ ನಡೆಸಿ, ಆಯುಕ್ತೆ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ವಿವರ: ಸೋಮಶೇಖರ್ ಅವರು ಸಂಜೆ 4 ಗಂಟೆಗೆ ಆಯುಕ್ತೆಯನ್ನು ನಗರಸಭೆಯ ಅವರ ಕೊಠಡಿಯಲ್ಲಿ ಸಂಪರ್ಕಿಸಿ ವಾರ್ಡಿನಲ್ಲಿ ಮೋಟರ್ ದುರಸ್ತಿ ಮಾಡಿಸಬೇಕು, ಬೀದಿ ದೀಪಗಳ ದುರಸ್ತಿ ಮಾಡಿಸಬೇಕು ಎಂದು ಕೋರಿದರು. ನಗರಸಭೆ ಸಭೆಯಲ್ಲಿ ಈ ಕುರಿತು ತೀರ್ಮಾನವಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತೆ ತಿಳಿಸಿದರು.
 
ಅದಕ್ಕೆ ಒಪ್ಪದ ಸದಸ್ಯ ಆಯುಕ್ತೆಯನ್ನು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿದರು.
ಕತ್ತರಿಸಿ ಹಾಕ್ತೀನಿ ಎಂದು ಕೊಲೆ ಬೆದರಿಕೆ ಹಾಕಿದರು. ಕೆಲಸ ಮಾಡಲಾಗದಿದ್ದರೆ ಬೇರೆ ಕಡೆಗೆ ಹೋಗು ಎಂದು ಒತ್ತಾಯಿಸಿದರು.

ಕೆಟ್ಟದಾಗಿ ವರ್ತಿಸಿ ನನ್ನ ಕೆಲಸ ಮಾಡಲು ಅಡ್ಡಿಪಡಿಸಿದ್ದಾರೆ. ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿಯೂ ಅದಕ್ಕೆ ಸಾಕ್ಷಿಯಾಗಿದ್ದಾರೆ. ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತೆ ಮನವಿಯಲ್ಲಿ ಕೋರಿದ್ದಾರೆ. 28 ನೌಕರರು ಸಹಿ ಮಾಡಿದ್ದಾರೆ.

ಸದಸ್ಯರ ಆರೋಪ: ಗಲ್‌ಪೇಟೆ ಠಾಣೆ ಮುಂದೆ ಧರಣಿ ನಡೆಸಿದ ಸದಸ್ಯ ಸೋಮಶೇಖರ್ ಕೂಡ ಆಯುಕ್ತೆ ವಿರುದ್ಧ ಅವೇ ಆರೋಪಗಳನ್ನು ಮಾಡಿದ್ದಾರೆ. ವಾರ್ಡ್‌ನ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿದರೆ ಆಯುಕ್ತೆ, ಜನಪ್ರತಿನಿಧಿ ಎಂಬ ಕನಿಷ್ಠ ಸೌಜನ್ಯವೂ ಇಲ್ಲದೆ ನನ್ನೊಡನೆ ಅವಾಚ್ಯವಾಗಿ ಮಾತನಾಡಿ, ಅಮಾನವೀಯವಾಗಿ ವರ್ತಿಸಿದಾರೆ.

ಕೊಲೆ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲೆ ಮಾಡುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಹೇಳಿದರು.

`ಎಷ್ಟೆಂದು ಸಹಿಸಿಕೊಳ್ಳಲಿ?~

ಧರಣಿ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಆಯುಕ್ತೆ ಶಾಲಿನಿ, ನನ್ನ ತಾಳ್ಮೆ ಮುಗಿಯಿತು. ಎಷ್ಟೂ ಅಂತ ಸಹಿಸಿಕೊಳ್ಳಲಿ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರಿಗೆ ಸುಮ್ಮನೆ ಕೊಲೆ ಬೆದರಿಕೆ ಏಕೆ ಹಾಕಲಿ? ಅವರೇ ನನಗೆ ಕೊಲೆ ಬೆದರಿಕೆ ಹಾಕಿದರು. ಕತ್ತರಿಸಿ ಹಾಕ್ತೀನಿ ಎಂದರು. ನಾನೂ ಹಾಗೇ ಹೇಳಿದೆ. ಅವರ ಹೆಸರು ರೌಡಿ ಶೀಟರ್‌ನಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ.
 
ನಾನೇನೂ ರೌಡಿಯಲ್ಲ. ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿ ಬಂದಿರುವ ಅಧಿಕಾರಿ. ಪದೇಪದೆ ನನ್ನನ್ನು ಅವಾಚ್ಯವಾಗಿ ನಿಂದಿಸುವುದನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ನನ್ನ ಬಗ್ಗೆಯಷ್ಟೆ ಅಲ್ಲದೆ ನಗರಸಭೆ ಅಧ್ಯಕ್ಷೆಯ ಬಗ್ಗೆಯೂ ಸದಸ್ಯರು ಏಕವಚನಲ್ಲಿ ಮಾತನಾಡಿದರು. ಅವರ ಅನುಪಸ್ಥಿತಿಯಲ್ಲಿ ಹಾಗೆ ಮಾತನಾಡಿರುವುದು ಕೂಡ ತಪ್ಪು. ಘಟನೆ ನಡೆದ ಬಳಿಕ ಜಿಲ್ಲಾಧಿಕಾರಿಗೆ ದೂರು ನೀಡಲು ತೆರಳಿದೆ.

ಅವರು ಲಭ್ಯವಿರಲಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಬಾಬಣ್ಣನವರಿಗೆ ಮಾಹಿತಿ ನೀಡಿರುವೆ. ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಈ ಘಟನೆ ಬಗ್ಗೆ ಉಸ್ತುವಾರಿ ಸಚಿವ ವರ್ತೂರು ಪ್ರಕಾಶರ ಗಮನಕ್ಕೂ ತಂದಿರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT