ADVERTISEMENT

ಆನೆಗಳಿಗೆ ಹುಡುಕಾಟ: ರೈತರಿಗೆ ಪ್ರಾಣಸಂಕಟ

ಎಮ್ಮೆ ಕಂಡರೂ ಆನೆಯೇ ಇರಬಹುದು ಎಂಬ ಭಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 8:33 IST
Last Updated 25 ಜೂನ್ 2013, 8:33 IST

ಮಾಲೂರು:  ಕಾಡಾನೆಗಳು ತಾಲ್ಲೂಕನ್ನು ಬಿಟ್ಟಿದ್ದರೂ ಅವುಗಳ ಭೀತಿ ಮಾತ್ರ ತಾಲ್ಲೂಕಿನ ರೈತರನ್ನು ಬಿಟ್ಟಿಲ್ಲ. ದೂರದಲ್ಲಿ ಎಮ್ಮೆ ಕಂಡರೂ ಅದು ಆನೆಯೇ ಇರಬಹುದು ಎಂಬ ಆತಂಕ ಆವರಿಸಿದೆ!

ತಾಲ್ಲೂಕಿನಲ್ಲಿ ಶನಿವಾರ ಮೂರು ಮಂದಿಯನ್ನು ಬಲಿ ಪಡೆದ 18 ಕಾಡಾನೆಗಳ ಹಿಂಡು ತಾಲ್ಲೂಕಿನ ಹಾರೋಹಳ್ಳಿ, ಅಬ್ಬೇನಹಳ್ಳಿ ಮತ್ತು ಕಣಿವೇನಹಳ್ಳಿ ಮೂಲಕ  ಭಾನುವಾರ ಪಕ್ಕದ ಹೊಸಕೋಟೆ ತಾಲ್ಲೂಕಿನ ಚಿಕ್ಕತಗ್ಗಲಿ ಕೆರೆ ಅಂಗಳದಲ್ಲಿ ವಾಸ್ಯವ್ಯ ಹೂಡಿದ್ದವು.

ಮಧ್ಯಾಹ್ನ ಪತ್ರಕರ್ತನನ್ನು  ಬಲಿ ತೆಗೆದುಕೊಂಡ 13 ಆನೆಗಳ ಹಿಂಡು ಸೋಮವಾರ ಬೆಳಿಗ್ಗೆ ಸರ್ಜಾಪುರ ಬಳಿಯ ದೊಮ್ಮಸಂದ್ರ ಮತ್ತು ಹುಸ್ಕೂರು ಕೆರೆ ಅಂಗಳದಲ್ಲಿ ವಾಸ್ತವ್ಯ ಹೂಡಿದ್ದವು.

ಸೋಮವಾರ ಹುಸ್ಕೂರು ಕೆರೆಯ ಅಂಗಳದಲ್ಲಿ 13 ಆನೆಗಳು  ಮಾತ್ರ ಕಾಣಿಸಿಕೊಂಡಿದ್ದು, ಉಳಿದ 5 ಆನೆಗಳ ಮಾಹಿತಿ ಸಿಗದೇ ಇದ್ದುದರಿಂದ  ಇಲ್ಲಿನ ಗ್ರಾಮೀಣ ಜನತೆ ಆತಂಕಗೊಂಡು ಅವು ತಾಲ್ಲೂಕಿನಲ್ಲೇ ಇವೆ ಎಂಬ ಭಯ ವ್ಯಕ್ತಪಡಿಸುತ್ತಿದ್ದರು.

ನೀಲಗಿರಿ ತೋಪುಗಳಲ್ಲಿ ಎಮ್ಮೆಗಳನ್ನು ಕಂಡರೂ ಗ್ರಾಮಸ್ಥರು ಬೆಚ್ಚಿ ಬೀಳುವ ಪರಿಸ್ಥಿತಿ ಉಂಟಾಗಿದೆ. ಕಣಿವೇನಹಳ್ಳಿಯ ಕರಿ ಬಂಡೆ ಬಳಿ ಮರಿಹಾಕಿದೆ, ಇರುಬನಹಳ್ಳಿ ಕೆರೆಯಲ್ಲಿ ಆನೆಗಳಿವೆ, ಕುಂತೂರು ಬಳಿ ಇರುವ ಬೆಸ್ಕಾಂ ಸ್ಟೇಷನ್ ಹಿಂಭಾಗದಲ್ಲಿ ಆನೆಗಳು ಮರಿಹಾಕಿವೆ ಎಂಬ ವದಂತಿಗಳನ್ನು ಕಿಡಿಗೇಡಿಗಳು ಹಬ್ಬಿಸಿದ್ದರಿಂದ ಗ್ರಾಮಸ್ಥರು ಭಯಭೀತರಾಗಿ ಸೋಮವಾರವು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲಿಲ್ಲ.

ಕಾರ್ಮಿಕರು ಮತ್ತು ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸದೇ ತಮ್ಮ ಮನೆಗಳಲ್ಲೇ ಉಳಿದಿದ್ದರು.
ಸೋಮವಾರ ಬೆಳಿಗ್ಗೆ ಅಬ್ಬೇನಹಳ್ಳಿ ಗ್ರಾಮದ ಉಜ್ವಲ ಶಾಲೆ ಬಳಿ ಇರುವ ನೀಲಗಿರಿ ತೋಪಿನಲ್ಲಿ 5 ಆನೆಗಳಿವೆ ಎಂಬ ಮಾಹಿತಿಯನ್ನು ಹಬ್ಬಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಬ್ಬೇನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸುತ್ತ-ಮುತ್ತಲ ಗ್ರಾಮಗಳ ನೀಲಗಿರಿ ತೋಪುಗಳಲ್ಲಿ ಪರಿಶೀಲಿಸಿದರು. ಕೊನೆಗೆ ಆನೆಗಳ ಮಾಹಿತಿ ಇಲ್ಲದೇ ಇರುವುದರಿಂದ ಗ್ರಾಮಸ್ಥರಲ್ಲಿ ಧೈರ್ಯತುಂಬಿ ಈ ಭಾಗದಲ್ಲಿ ಆನೆಗಳು ಇಲ್ಲ ಎಂದು ಮನವರಿಕೆ ಮಾಡಿದರು.

ಡಿವೈಎಸ್‌ಪಿ ಶ್ರೀಹರಿ ಬರಗೂರು, ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಎಸ್.ಐ.ಮೋಹನ್‌ರೆಡ್ಡಿ, ಅರಣ್ಯ ಇಲಾಖೆ ಅಧಿಕಾರಿ ಸುಬ್ಬರಾವ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.