ADVERTISEMENT

ಆಯುಕ್ತರ ದಾಳಿ: 5 ಟ್ರ್ಯಾಕ್ಟರ್, ಜೆಸಿಬಿ ವಶ

ಅಮ್ಮೇರಹಳ್ಳಿ ಕೆರೆಯಲ್ಲಿ ಅಕ್ರಮ ಮರಳು ಸಾಗಣೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:21 IST
Last Updated 13 ಜೂನ್ 2013, 8:21 IST

ಕೋಲಾರ: ನಗರದ ಪ್ರಮುಖ ನೀರಿನ ಆಸರೆಯಾದ ಅಮ್ಮೇರಹಳ್ಳಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಕ್ರಮವಾಗಿ ಮಣ್ಣು, ಮರಳು ಸಾಗಿಸಲು ಬಳಸುತ್ತಿದ್ದ 5 ಟ್ರಾಕ್ಟರ್, ಒಂದು ಜೆಸಿಬಿ ಯಂತ್ರವನ್ನು ನಗರಸಭೆ ಆಯುಕ್ತ ಮಹೇಂದ್ರಕುಮಾರ್ ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕರು ಪರಾರಿಯಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕೆರೆಯಲ್ಲಿ ಮಣ್ಣು, ಮರಳು ಸಾಗಣೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಆಯುಕ್ತ ಮಹೇಂದ್ರಕುಮಾರ್, ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ದಾಳಿ ಕಾರ್ಯಾಚರಣೆ ನಡೆಸಿದರು.

ನಂತರ ಮಾತನಾಡಿದ ಮಹೇಂದ್ರಕುಮಾರ್ ನಗರದ ಕುಡಿಯುವ ನೀರಿನ ಆಸರೆಯಾದ ಕೋಲಾರಮ್ಮ, ಅಮ್ಮೇರಹಳ್ಳಿ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳು ನಗರಸಭೆ ವ್ಯಾಪ್ತಿಯಲ್ಲಿವೆ. ಕುಡಿಯುವ ನೀರಿನ ಕೊಳವೆ ಬಾವಿಗಳು ಇಲ್ಲಿವೆ. ಈ ಕೆರೆಗಳಲ್ಲಿ ಅಕ್ರಮವಾಗಿ ಮರಳು, ಮಣ್ಣು ಸಾಗಣೆಗೆ ಮುಂದಾದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.

ಕೆರೆಯೊಳಕ್ಕೆ ಟ್ರ್ಯಾಕ್ಟರ್ ಮತ್ತಿತರ ವಾಹನ ಪ್ರವೇಶಿಸದಂತೆ ಮಾರ್ಗಗಳನ್ನು ಬಂದ್ ಮಾಡಲಾಗುವುದು. ಮಾರ್ಗಗಳಲ್ಲಿ ಜೆಸಿಬಿಯಿಂದ ಕಾಲುವೆ ಅಗೆಸಿ ತಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕೆರೆಗಳಲ್ಲಿ ಮಣ್ಣು, ಮರಳು ತೆಗೆಯುವುದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ತೊಂದರೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಅಕ್ರಮವಾಗಿ ಮರಳು, ಮಣ್ಣು ತೆಗೆಯುವುದು ಕಂಡು ಬಂದರೆ ಕೂಡಲೇ ನಗರಸಭೆ ಆಯುಕ್ತರಿಗೆ ದೂರು ನೀಡಬೇಕು ಎಂದು ಸದಸ್ಯ ಎಸ್.ಆರ್.ಮುರಳಿಗೌಡ ಮನವಿ ಮಾಡಿದರು.

ಕಾರ್ಯಾಚರಣೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗರುಡಾಚಲಮೂರ್ತಿ, ಸಹಾಯಕ ಎಂಜನಿಯರ್ ಕೊಟ್ರೇಶಪ್ಪ, ಕಿರಿಯ ಎಂಜಿನಿಯರ್ ಮೋಹನ್, ಕಂದಾಯ ನಿರೀಕ್ಷಕರಾದ ಚಲಪತಿ, ಕೃಷ್ಣಪ್ಪ, ಆರೋಗ್ಯ ನಿರೀಕ್ಷಕ ರಮೇಶ್, ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.