ADVERTISEMENT

ಆರಕ್ಕೇರದ ಮೂರಕ್ಕಿಳಿಯದ ಅವರೆ ಕಾಯಿ ಬೆಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 9:36 IST
Last Updated 26 ಡಿಸೆಂಬರ್ 2017, 9:36 IST
ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕ
ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕ   

ಶ್ರೀನಿವಾಸಪುರ: ಅವರೆ ಕಾಯಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಬೆಳೆಗಾರರು ನಿರಾಶರಾಗಿದ್ದಾರೆ. ಬೆಲೆ ಇಳಿಕೆಯ ಲಾಭ ಗ್ರಾಹಕನಿಗೆ ಸಿಗುತ್ತಿಲ್ಲ. ತಾಲ್ಲೂಕಿನಲ್ಲಿ ಅವರೆ ಕಾಯಿ ಸುಗ್ಗಿ ಪೂರ್ಣ ಪ್ರಮಾಣದಲ್ಲಿ ಶುರುವಾಗಿದೆ. ಪ್ರತಿ ದಿನ ರೈತರು ಕಾಯಿ ಕಿತ್ತು ತಂದು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ಹರಾಜಿನಲ್ಲಿ ರೈತನಿಗೆ ಕೆಜಿಯೊಂದಕ್ಕೆ ₹ 23 ಸಿಗುತ್ತಿದೆ. ಈ ಬೆಲೆಯೇ ನಿಲ್ಲುತ್ತದೆ ಎಂಬ ಭರವಸೆ ಇಲ್ಲ. ಕಾಯಿ ಆವಕ ಹೆಚ್ಚಿದಂತೆ ಬೆಲೆ ಕುಸಿಯುವುದು ಸಾಮಾನ್ಯವಾಗಿದೆ.

ಈ ಬೆಲೆಯಲ್ಲಿ ಬೆಳೆಗಾರರಿಗೆ ಗಿಟ್ಟುವುದಿಲ್ಲ. ಕಾಯಿ ಬಿಡಿಸುವ ಕೂಲಿ ದುಬಾರಿಯಾಗಿದೆ. ಸಾಗಾಣಿಕೆ ವೆಚ್ಚ ತೆಗೆದರೆ ಕೈಗೆ ಬರುವುದು ಅಷ್ಟಕ್ಕಷ್ಟೆ ಎಂದು ಮಾರುಕಟ್ಟೆಗೆ ಕಾಯಿ ತರುವ ರೈತರ ಅಳಲು ತೋಡಿಕೊಳ್ಳುತ್ತಾರೆ.

ಇಲ್ಲಿನ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರುವ ಅವರೆ ಕಾಯಿ, ಹೊರ ರಾಜ್ಯಗಳು ಹಾಗೂ ರಾಜ್ಯದ ದೊಡ್ಡ ನಗರಗಳಿಗೆ ರವಾನೆಯಾಗುತ್ತಿದೆ. ಸ್ಥಳೀಯ ಚಿಲ್ಲರೆ ವ್ಯಾಪಾರಿಗಳು ಕೆಜಿಯೊಂದಕ್ಕೆ ₹ 30 ರಂತೆ ಮಾರುತ್ತಿದ್ದಾರೆ. ಕಾಯಿ ಬೆಲೆ ಕಡಿಮೆಯಾದರೂ, ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ.

ADVERTISEMENT

ಒಗ್ಗಟ್ಟು ಪ್ರದರ್ಶಿಸುವ ವ್ಯಾಪಾರಿಗಳು ಉತ್ಪನ್ನಕ್ಕೆ ಒಂದೇ ಬೆಲೆ ಇಡುವುದರ ಮೂಲಕ ಗ್ರಾಹಕರನ್ನು ಕಟ್ಟಿಹಾಕುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಬೆಳೆಗಾರರಿಗಿಂತ ಮಧ್ಯವರ್ತಿಗಳು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರೆ ಕಾಯಿ ಕಾಲವಾಗಿರುವುದರಿಂದ ಎಲ್ಲ ತರಕಾರಿಗಳ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪಿನ ಬೆಲೆಯು ಸಹ ಇಳಿಕೆಯಾಗಿದೆ.

* * 

ಈ ಹಿಂದೆ ಅವರೆ ಕಾಯಿ ಬೆಲೆ ಕೆಜಿಯೊಂದಕ್ಕೆ ₹ 40 ರಿಂದ 50 ಇದ್ದಿತು. ಕೈಗೆ ನಾಲ್ಕು ಕಾಸು ಬರುತ್ತಿತ್ತು. ಈಗಿನ ಬೆಲೆಯಲ್ಲಿ ಬೆಳೆಗೆ ಹಾಕಿದ ಬಂಡವಾಳಕ್ಕೂ ಸಂಚಕಾರ ಬರುತ್ತಿದೆ
ಪಿ.ಬಾಲಕೃಷ್ಣಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.