ADVERTISEMENT

ಆಶ್ರಯ ನಿವೇಶನ: ಜೆಡಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:05 IST
Last Updated 11 ಫೆಬ್ರುವರಿ 2011, 9:05 IST

ಮಾಲೂರು: ಪುರಸಭಾ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನ ಹಂಚಿಕೆಗೆ ಆಗ್ರಹಿಸಿ ಹಾಗೂ ಕ್ರಿಮಿನಲ್ ದೂರು ದಾಖಲಾಗಿರುವ ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪುರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ನಿವೇಶನ ರಹಿತ ಹಾಗೂ ಬಡತನ ರೇಖೆಗಿಂತ ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಜನತೆಗೆ ನಿವೇಶನ ನೀಡುವ ಸಲುವಾಗಿ 2004ರಲ್ಲಿ ಆಶ್ರಯ ಸಮಿತಿ ಪರಿಶಿಷ್ಟಜಾತಿ ಮತ್ತು ಪಂಗಡದ ಫಲಾನುಭವಿಗಳಿಂದ ರೂ. 2500 ಹಾಗೂ ಇತರೆ ಜನಾಂಗದವರಿಂದ 5 ಸಾವಿರ ರೂ. ಸಂಗ್ರಹಿಸಿ 23 ಎಕರೆ ಭೂಮಿಯನ್ನು ನಿವೇಶನ ಹಂಚಲು ನೋಂದಣಿ ಮಾಡಲಾಗಿದೆ.ಆದರೆ 7 ವರ್ಷ ಕಳೆದರೂ ಇದುವರೆಗೂ ನಿವೇಶನ ಹಂಚಿಕೆಯಾಗಿಲ್ಲ ಎಂದು ಮಾಜಿ ಶಾಸಕ ಎ.ನಾಗರಾಜು ಆರೋಪಿಸಿದರು.

ಈಗ ಎಸ್‌ಸಿ ಮತ್ತು ಎಸ್‌ಟಿ ಜನಾಂಗದವರು ರೂ. 37 ಸಾವಿರ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳು ರೂ. 50 ಸಾವಿರ ಪಾವತಿಸಿದರೆ ನಿವೇಶನ ನೀಡುವುದಾಗಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಘೋಷಿಸಿರುವುದರ ಹಿಂದೆ ಭೂಮಿ ಕಬಳಿಸವು ಷಡ್ಯಂತರ ಇದೆ ಎಂದು ಆಪಾದಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಈಚೆಗೆ ನಡೆದ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಸಂದರ್ಭ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಟೇಕಲ್ ಜಿ.ಪಂ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೂ ಮಾರ್ಕಂಡಯ್ಯ ಕೆರೆಯಿಂದ 2 ತಿಂಗಳೊಳಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಹೇಳಿರುವ ಭರವಸೆ ಈಡೇರಿಸಿದರೆ ಕ್ಷೇತ್ರದಿಂದ ಆಯ್ಕೆಯಾಗಿರುವ ತಮ್ಮ ಪತ್ನಿ ಜಿ.ಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವರು. ವಿಫಲರಾದರೆ ಶಾಸಕ ಸ್ಥಾನಕ್ಕೆ ಕೃಷ್ಣಯ್ಯಶೆಟ್ಟೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. 
 
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಪ್ರಕಾಶ್, ಮುಖಂಡರಾದ ಆರ್.ಪ್ರಭಾಕರ್, ಟಿ. ನಾರಾಯಣಪ್ಪ, ಅಂಜನಿ ಸೋಮಣ್ಣ, ಮಾಜಿ ಜಿ.ಪಂ ಸದಸ್ಯರಾದ ಎಚ್.ಹನುಮಂತಪ್ಪ, ಜಿ.ಇ. ರಾಮೇಗೌಡ, ನಗರಾಧ್ಯಕ್ಷ ಹನುಮಂತರೆಡ್ಡಿ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಾರದಮ್ಮ, ವಿಜಯಮ್ಮ, ಮಾಜಿ ತಾ.ಪಂ. ಅಧ್ಯಕ್ಷರಾದ ಅಶೋಕ್‌ಕುಮಾರ್, ಅನ್ವರ್‌ಸಾಬ್, ಸಾಧಿಕ್ ಪಾಷ, ಇಂದುಮಂಗಲ ನಾರಾಯಣಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.