ಕೋಲಾರ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿ ಪರಸ್ಪರ ಹಲ್ಲೆ ನಡೆಸಿದ ಘಟನೆ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ವೇಮಗಲ್ ಹೋಬಳಿಯ ಸಾಹುಕಾರ್ ಶೆಟ್ಟಿಹಳ್ಳಿಯ ಶ್ರೀನಿವಾಸಗೌಡ ಮತ್ತು ಹೊದಲವಾಡಿಯ ಪಾಪೇಗೌಡ ಎಂಬುವವರ ನಡುವೆ ಹಲವು ದಿನಗಳಿಂದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜಗಳ ನಡೆಯುತ್ತಿತ್ತು. ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ತೀರ್ಪು ಶ್ರೀನಿವಾಸಗೌಡರ ಪರವಾಗಿ ಹೊರಬಂದಿತ್ತು.
ನಂತರ ಅವರು ಜಮೀನನ್ನು ಮಾರಾಟ ಮಾಡಿ ನೋಂದಣಿ ಸಲುವಾಗಿ ನಗರದ ಉಪನೋಂದಣಾಧಿಕಾರಿ ಕಚೇರಿಗೆ ಬಂದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಆಸ್ತಿ ನೋಂದಣಿಗೆ ಅಡ್ಡಿಪಡಿಸಿದ ಪಾಪೇಗೌಡ, ಶ್ರೀನಿವಾಸಗೌಡರ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದರು. ಅದನ್ನು ವಿರೋಧಿಸಿ ಶ್ರೀನಿವಾಸಗೌಡರ ಕಡೆಯವರು ಅವರ ಮೇಲೆ ಪ್ರತಿಯಾಗಿ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನೂಕಾಟ, ತಳ್ಳಾಟವೂ ನಡೆದು, ಸ್ಥಳದಲ್ಲಿದ್ದ ಸಾರ್ವಜನಿಕರೂ ಗೊಂದಲಕ್ಕೀಡಾದರು. ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರ ಜಗಳ ಬಿಡಿಸಿ ಸನ್ನಿವೇಶ ನಿಯಂತ್ರಿಸಿದರು. ಪಾಪೇಗೌಡರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.