ADVERTISEMENT

ಇಲ್ಲೊಂದು ಮಾದರಿ ಶೌಚ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2011, 9:25 IST
Last Updated 14 ನವೆಂಬರ್ 2011, 9:25 IST
ಇಲ್ಲೊಂದು ಮಾದರಿ ಶೌಚ ನಿರ್ವಹಣೆ
ಇಲ್ಲೊಂದು ಮಾದರಿ ಶೌಚ ನಿರ್ವಹಣೆ   

ಶ್ರೀನಿವಾಸಪುರ:  ಮಾವಿನ ಪಟ್ಟಣದಲ್ಲಿ ಶೌಚ ನಿರ್ವಹಣೆ ಜಿಲ್ಲೆಯಲ್ಲಿಯೇ ಮಾದರಿ. ಪಟ್ಟಣದ ಎಲ್ಲ ಮನೆಗಳು ಒಳಚರಂಡಿ ಸಂಪರ್ಕ ಪಡೆದುಕೊಂಡರೆ ಇಲ್ಲಿನ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಸಮಾಪ್ತಿಯಾಗುತ್ತದೆ.

ತಾಲ್ಲೂಕಿನ ನಾಗರಿಕರಿಗೆ ಮಲ ಹೊರುವ ಪದ್ಧತಿಯ ಅರಿವೇ ಇಲ್ಲ.  ಕಾರಣ ಇಲ್ಲಿ ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆ ಇದೆ. ಕೋಲಾರ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲು ಒಳಚರಂಡಿ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದ ಕೀರ್ತಿ ಶ್ರೀನಿವಾಸಪುರ ಪುರಸಭೆಗೆ ಸಲ್ಲುತ್ತದೆ.


 ಪಟ್ಟಣದಲ್ಲಿ ಶೇ.90 ಭಾಗ ಒಳಚರಂಡಿ ವ್ಯವಸ್ಥೆ ಬಳಕೆಯಲ್ಲಿದೆ. ಉಳಿದ ಮನೆಗಳು ಒಳಚರಂಡಿ ಸಂಪರ್ಕ ಪಡೆಯಬೇಕಾಗಿದೆ. ಪಟ್ಟಣದ ಬೇರೆ ಬೇರೆ ಬಡಾವಣೆಗಳಿಂದ ಹೊರಬೀಳುವ ಮಲ ಮಿಶ್ರಿತ ನೀರು ಪಟ್ಟಣದ ಹೊರ ವಲಯದ ಮುಳಬಾಗಲು ರಸ್ತೆ ಪಕ್ಕದಲ್ಲಿ ನಿರ್ಮಿಸಲಾದ ಬೃಹತ್ ಗಾತ್ರದ ತೊಟ್ಟಿಗಳಲ್ಲಿ ಶೇಖರಣೆಯಾಗುತ್ತದೆ. ಅದನ್ನು ಯಂತ್ರಾಗಾರದಲ್ಲಿನ ಯಂತ್ರಗಳ ನೆರವಿನಿಂದ ದೂರದ ಹೆಬ್ಬಟ ಗ್ರಾಮದ ಕೆರೆ ಅಂಗಳದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತಿದೆ. ಅಲ್ಲಿ ನಿರ್ಮಿಸಲಾಗಿರುವ ಬೃಹತ್ ಗಾತ್ರದ 3 ತೊಟ್ಟಿಗಳಲ್ಲಿ ಸಂಸ್ಕರಣಾ ಕಾರ್ಯ ಕೈಗೊಳ್ಳಲಾಗಿದೆ.

`ಈ ಹಿಂದೆ ಸಮಸ್ಯೆಗೆ ಕಾರಣವಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಶೌಚಾಲಯವನ್ನು ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಶೌಚಾಲಯದ  ಹಿಂಗು ಗುಂಡಿ ತುಂಬಿದಾಗ ಮತ್ತು ಒಳಚರಂಡಿ ಸಂಪರ್ಕ ಪಡೆಯದಿರುವ ನಾಗರಿಕರ ಶೌಚ ಗುಂಡಿಗಳನ್ನು ಮದನಪಲ್ಲಿಯಿಂದ ಸಕ್ಕಿಂಗ್ ಯಂತ್ರವನ್ನು ಬಾಡಿಗೆಗೆ ತಂದು ಹೊರಗೆ ಎಳೆಯಲಾಗುತ್ತಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಇಲ್ಲಿನ ಪುರಸಭೆ ಇನ್ನೊಂದು ತಿಂಗಳಲ್ಲಿ ಸಕ್ಕಿಂಗ್ ಯಂತ್ರಖರೀದಿಸಲಿದೆ~ ಎಂದು ಪುರಸಭೆಯ ಆರೋಗ್ಯ ನಿರೀಕ್ಷಕ ಜಿ.ನವೀನ್ ಚಂದ್ರ ತಿಳಿಸಿದರು.

  ಶ್ರೀನಿವಾಸಪುರ ಮತ್ತು ಹೆಬ್ಬಟ ಗ್ರಾಮದ ಕೆರೆಯಲ್ಲಿನ ಮಲಿನ ನೀರು ಸಂಸ್ಕರಣಾ ಘಟಕಗಳ ಸುತ್ತ ಬೇರೆ ಬೇರೆ ಜಾತಿಯ ಗಿಡಗಳನ್ನು ಬೆಳೆಸಲಾಗುವುದು. ಮಲದ ವಾಸನೆ ಹರಡದಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ತೊಟ್ಟಿಗಳು ತುಂಬಿದಲ್ಲಿ ಘನ ಮಲವನ್ನು ತೆಗೆದು ಪುರಸಭೆಯ ಉದ್ಯಾನದ ಗಿಡ ಮರಗಳಿಗೆ ಬಳಸಲು ಉದ್ದೇಶಿಸಲಾಗಿದೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಪಟ್ಟಣದಲ್ಲಿ ಸದ್ಯ ನೀರಿಗೆ ಸಮಸ್ಯೆ ಇಲ್ಲದಿರುವುದರಿಂದ ಒಳಚರಂಡಿ ವ್ಯವಸ್ಥೆ ಸುಗಮವಾಗಿ ನಡೆಯಲು ಸಾಧ್ಯವಾಗಿದೆ. ಆದರೆ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವುದು ಒಂದು ಕೊರತೆಯಾಗಿದೆ ಎಂದು ನಾಗರಿಕ ಮುನಿಯಪ್ಪ ಅಭಿಪ್ರಾಯಪಟ್ಟರು. ಇಷ್ಟರ ನಡುವೆಯೂ ಒಣ ಶೌಚಾಲಯ ಹೊಂದುವುದನ್ನು, ತಲೆ ಮೇಲೆ ಮಲ ಹೊರುವುದನ್ನು ಮತ್ತು ಮಲ ಹೊರಲು ಪ್ರಚೋದನೆ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಪುರಸಭೆಯ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಉಪಾಧ್ಯಕ್ಷ ನಯಾಜ್ ಪಾಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ವೆಂಕಟೇಶ್, ಮುಖ್ಯಾಧಿಕಾರಿ ಕೆ.ಜಗದೀಶ್ ತಿಳಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT