ADVERTISEMENT

ಉನ್ನತ ತನಿಖೆಗೆ ಒತ್ತಾಯಿಸಿ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 8:44 IST
Last Updated 28 ಅಕ್ಟೋಬರ್ 2017, 8:44 IST

ಕೋಲಾರ: ‘ಯರಗೋಳ್‌ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ಈ ಬಗ್ಗೆ ಉನ್ನತ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಜಿಲ್ಲಾಧಿಕಾರಿ ಎದುರು ಶುಕ್ರವಾರ ಧರಣಿ ನಡೆಸಿದರು.

‘ಬಂಗಾರಪೇಟೆ ತಾಲ್ಲೂಕಿನಲ್ಲಿ ಯರಗೋಳ್‌ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಜಿಲ್ಲಾ ಕೇಂದ್ರಕ್ಕೆ ಬೈಕ್‌ ರ‍್ಯಾಲಿ ಬಂದ ಧರಣಿ ನಿರತರು, ಗುತ್ತಿಗೆದಾರರು ಅಧಿಕಾರಿಗಳ ಜತೆ ಶಾಮೀಲಾಗಿ ಯೋಜನೆಯ ಅನುದಾನವನ್ನು ಲೂಟಿ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಕೇಂದ್ರ ಸೇರಿದಂತೆ ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. 2010ರಲ್ಲಿ ಯೋಜನೆ ಆರಂಭವಾದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಸರ್ಕಾರ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ’ ಎಂದು ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್‌ ಹೇಳಿದರು.

ADVERTISEMENT

‘ಯರಗೋಳ್‌ ಕಾಲುವೆಗೆ ಅಣೆಕಟ್ಟು ನಿರ್ಮಿಸಿ ಸಂಗ್ರಹವಾದ ನೀರನ್ನು ತಾಲ್ಲೂಕುಗಳಿಗೆ ಹರಿಸುವ ಉದ್ದೇಶಕ್ಕಾಗಿ ಸುಮಾರು ₹ 180 ಕೋಟಿ ಅಂದಾಜು ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜನ ನೀರಿಲ್ಲದೆ ತತ್ತರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳಿಗೆ ನೀರಿನ ಸಮಸ್ಯೆಯ ಅರಿವಿಲ್ಲ’ ಎಂದು ದೂರಿದರು.

ಕಲ್ಲು ಗಣಿಗಾರಿಕೆ: ‘ಯೋಜನೆಯ ಟೆಂಡರ್‌ ಪಡೆದಿರುವ ಹೈದರಾಬಾದ್‌ನ ರಾಮ್ಕಿ ಇನ್ಫ್ರಾಸ್ಟ್ರಕ್ಷರ್‌ ಲಿಮಿಟೆಡ್‌ ಸಕಾಲಕ್ಕೆ ಅಣೆಕಟ್ಟು ನಿರ್ಮಾಣ ಮಾಡಿಲ್ಲ. ಗುತ್ತಿಗೆದಾರರು ಯೋಜನೆಯ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸುವುದನ್ನು ಬಿಟ್ಟು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ’ ಎಂದು ಸಂಘಟನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ಯೋಜನೆಯ ಕಾಮಗಾರಿ ನಡೆಯದಿದ್ದರೂ ಗುತ್ತಿಗೆದಾರರಿಗೆ ₹ 22.34 ಲಕ್ಷ ಬಿಲ್ ಪಾವತಿಸಲಾಗಿದೆ. ಗುತ್ತಿಗೆದಾರರು ಸಕಾಲಕ್ಕೆ ಯೋಜನೆ ಪೂರ್ಣಗೊಳಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ. ಯೋಜನೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಶೀಘ್ರವೇ ಕಾಮಗಾರಿ ಪುನರಾರಂಭ ಮಾಡಬೇಕು’ ಎಂದು ಧರಣಿ ನಿರತರು ಆಗ್ರಹಿಸಿದರು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ಉಮಾಗೌಡ, ವೆಂಕಟೇಶಪ್ಪ, ಚಂದ್ರಪ್ಪ, ಪವಿತ್ರಾ ಧರಣಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.