ADVERTISEMENT

ಎತ್ತಿನಹೊಳೆ ಅನುಷ್ಠಾನಕ್ಕೆ ಕ್ಷಿಪ್ರ ಗತಿ ಕಾರ್ಯಾಚರಣೆ

ಯೋಜನಾ ವರದಿ ತಯಾರಿಕೆಗೆ ರೂ.50 ಕೋಟಿ ಬಿಡುಗಡೆ: ಸಚಿವ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 9:04 IST
Last Updated 18 ಜುಲೈ 2013, 9:04 IST

ಬೆಂಗಳೂರು: `ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ತಯಾರಿಸಲು ರೂ.50 ಕೋಟಿ ಬಿಡುಗಡೆ ಮಾಡಲಾಗಿದೆ' ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
`ಮುಖ್ಯ ಕಾಲುವೆಗಳ ಸರ್ವೇ ಕಾರ್ಯವನ್ನು ಎನ್.ಆರ್.ಎಸ್.ಸಿ ಸಂಸ್ಥೆಗೆ ವಹಿಸಿಕೊಡಲಾಗಿದೆ. ಸೇವಾ ಕಾಲುವೆ ಸಮೀಕ್ಷೆ ನಡೆಸುವ ಜತೆಗೆ ವಿವರವಾದ ಯೋಜನಾ ವರದಿ ನೀಡುವ ಹೊಣೆಯನ್ನು ಟೆಂಡರ್ ಮೂಲಕ ನವದೆಹಲಿಯ ಯುಆರ್‌ಎಸ್ ಸ್ಕಾಟ್ ವಿಲ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನೀಡಲಾಗಿದೆ' ಎಂದು ಹೇಳಿದರು.

`ಯು.ಆರ್.ಎಸ್. ಸ್ಕಾಟ್ ವಿಲ್ಸನ್ ಇಂಡಿಯಾ ಸಂಸ್ಥೆ ಈಗಾಗಲೇ ಪ್ರಾಥಮಿಕ ವರದಿಯನ್ನು ನೀಡಿದ್ದು, ಅದು ಜಿ.ಎಸ್. ಪರಶಿವಯ್ಯನವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ತಜ್ಞರ ಸಮಿತಿ ಪರಿಶೀಲನೆಯಲ್ಲಿದೆ' ಎಂದು ತಿಳಿಸಿದರು.

`ಬರಪೀಡಿತವಾದ ಜಿಲ್ಲೆಗಳಿಗೆ ಕುಡಿಯುವ ನೀರು ಸೇರಿದಂತೆ ಅಂತರ್ಜಲ ಮರುಪೂರಣ ಮತ್ತು ನೀರಾವರಿ ಸೌಲಭ್ಯಕ್ಕಾಗಿ ಎತ್ತಿನಹೊಳೆ ಸೇರಿದಂತೆ ಪರಮಶಿವಯ್ಯ ವರದಿ ಆಧಾರಿತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ತೀವ್ರಗತಿಯಲ್ಲಿ ಕಾರ್ಯಪ್ರವೃತ್ತವಾಗಿದೆ' ಎಂದು ಹೇಳಿದರು.

`ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದ 24.01 ಟಿಎಂಸಿ ಅಡಿ ನೀರು ಪಡೆಯಲು ರೂ 8,323.50 ಕೋಟಿ ಯೋಜನೆಗೆ 2012ರಲ್ಲೇ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಮೊದಲ ಹಂತದಲ್ಲಿ ಕರ್ನಾಟಕ ನೀರಾವರಿ ನಿಗಮದ ತಾಂತ್ರಿಕ ಉಪ ಸಮಿತಿಯಿಂದ ಮಂಜೂರಾದ ರೂ 3,269.50 ಕೋಟಿ ಮೊತ್ತದ ಹರವನಹಳ್ಳಿ ವಿತರಣಾ ಕೇಂದ್ರದವರೆಗಿನ ಏತ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು' ಎಂದು ವಿವರಿಸಿದರು.

`ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಏತ ಕಾಮಗಾರಿಗಳ ಅನುಷ್ಠಾನಕ್ಕಾಗಿ ಐದು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಅವುಗಳ ಮೌಲ್ಯನಿರ್ಧಾರದ ವರದಿಯನ್ನು ನಿಗಮದ ಮುಂದಿನ ತಾಂತ್ರಿಕ ಉಪಸಮಿತಿ ಸಭೆಯಲ್ಲಿ ಮಂಡಿಸಲಾಗುತ್ತದೆ. ಐದು ವರ್ಷಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ' ಎಂದು ಮಾಹಿತಿ ನೀಡಿದರು.

`ಎರಡನೇ ಹಂತದ ನೀರು ಸಾಗಾಣಿಕಾ ವ್ಯವಸ್ಥೆಯ ಸರ್ವೇಕ್ಷಣೆ, ವಿನ್ಯಾಸ, ಯೋಜನಾ ವರದಿ ತಯಾರಿಸಲು ಖಾಸಗಿ ತಾಂತ್ರಿಕ ಸಲಹೆಗಾರರನ್ನು ಟೆಂಡರ್ ಮೂಲಕ ನೇಮಿಸಲಾಗಿದೆ. 250 ಕಿ.ಮೀ. ಉದ್ದದ ಕಾಲುವೆಗಳ ಸರ್ವೇಕ್ಷಣೆ ಕಾರ್ಯ ಪ್ರಗತಿಯಲ್ಲಿದೆ' ಎಂದು ಹೇಳಿದರು.

ನೀರಿನ ಸಮಸ್ಯೆ ಪ್ರಶ್ನೆ ಎತ್ತಿದ ನಾರಾಯಣಸ್ವಾಮಿ, `ಮೂರು ಜಿಲ್ಲೆಗಳಲ್ಲಿ ಜನ ಕುಡಿಯುವ ನೀರಿನಲ್ಲಿ ವಿಷವೂ ಬೆರೆತುಹೋಗಿದೆ. ತಾಯಿಯ ಎದೆಹಾಲಿನಲ್ಲೂ ಫ್ಲೋರೈಡ್ ಅಂಶ ಇದೆ ಎಂಬುದನ್ನು ಪರೀಕ್ಷಾ ವರದಿಗಳು ಸಿದ್ಧಪಡಿಸಿವೆ. ಕುಡಿಯುವ ನೀರಿಗಾಗಿ ಇಲ್ಲಿನ ಜನ ಇನ್ನೂ ಎಷ್ಟು ಕಾಲ ಪರಿತಪಿಸಬೇಕು' ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ, `ಪಶ್ಚಿಮ ಮುಖವಾಗಿ ಹರಿಯುವ ನದಿಗಳ ತಿರುವು ಯೋಜನೆ ಆಗಲೇಬೇಕಾದ ಕೆಲಸ. ಆದರೆ, ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ, ಪಶ್ಚಿಮ ಘಟ್ಟ ಪ್ರದೇಶಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಮೀನುಗಾರಿಕೆಗೂ ಅಡಚಣೆ ಆಗದಂತೆ ಎಚ್ಚರವಹಿಸಬೇಕು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಿತರಕ್ಷಿಸಬೇಕು' ಎಂದು ಒತ್ತಾಯಿಸಿದರು.

ಸದಾನಂದಗೌಡರ ಹೇಳಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ನಾರಾಯಣಸ್ವಾಮಿ, `ನಾವು ಕೇಳುತ್ತಿರುವುದು ಕೇವಲ 24.01 ಟಿಎಂಸಿ ಅಡಿ ನೀರು. ಪ್ರತಿವರ್ಷ ಈ ನದಿಗಳಿಂದ 2000 ಟಿಎಂಸಿ ಅಡಿಗೂ ಅಧಿಕ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಮೀನುಗಾರಿಕೆಗೆ ಯೋಜನೆಯಿಂದ ಏನೂ ತೊಂದರೆ ಇಲ್ಲ' ಎಂದು ಹೇಳಿದರು.

`ಕರಾವಳಿ ಜಿಲ್ಲೆಗಳ ಹಿತ ಕಾಪಾಡಿಕೊಂಡೇ ಬಯಲುಸೀಮೆ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುವುದು' ಎಂದು ಸಚಿವರು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.