ADVERTISEMENT

ಕನ್ನಡ ನಾಡು, ನುಡಿ ಉಳಿವಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 6:33 IST
Last Updated 29 ನವೆಂಬರ್ 2017, 6:33 IST

ಮುಳಬಾಗಿಲು: ‘ಕನ್ನಡ ಭಾಷೆ ತುಂಬಾ ವಿಸ್ತಾರತೆ ಪಡೆದುಕೊಂಡಿದೆ. ಪ್ರತಿಯೊಬ್ಬರೂ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು’ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ ಸಲಹೆ ನೀಡಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಕನ್ನಡ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ರಸ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದರು.

ಕನ್ನಡ ಭಾಷೆ ಪ್ರಾಚೀನತೆ ಪಡೆದುಕೊಳ್ಳುವ ಜತೆಗೆ ಶಾಸ್ತ್ರೀಯ ಸ್ಥಾನಮಾನ ಗಳಿಸಿಕೊಂಡ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿನ ಸಾಹಿತ್ಯ ಕೃಷಿ ಪ್ರಪಂಚದ ಇತರೆ ಭಾಷೆಗಳಿಗಿಂತಲೂ ವಿಭಿನ್ನ ರೀತಿಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಸಹ ಕನ್ನಡ ನಾಡು, ನುಡಿಯ ಉಳಿವಿಗಾಗಿ ಶ್ರಮಿಸಬೇಕು ಎಂದು ಅವರು ಕೋರಿದರು.

ADVERTISEMENT

ಎಂಟು ಜ್ಞಾನಪೀಠ ಪ್ರಶಸ್ತಿ ಭಾಷೆಯ ಶ್ರೀಮಂತಿಕೆ ಎತ್ತಿ ಹಿಡಿದಿದೆ. ಆದ್ದರಿಂದ ಗಡಿ ಭಾಗದ ಪ್ರತಿಯೊಬ್ಬರೂ ಕನ್ನಡ ಭಾಷೆಯ ಸಾಹಿತ್ಯದ ಸವಿ ಸವಿಯಬೇಕು ಮನವಿ
ಮಾಡಿದರು.

ಅನ್ಯ ಭಾಷೆಯ ಕೃತಿ, ಕಾವ್ಯ, ಕಥೆ, ಕಾದಂಬರಿ, ನಾಟಕಗಳು ಕನ್ನಡ ಭಾಷೆಗೆ ಭಾಷಾಂತರ ಹಾಗೂ ಅನುವಾದಗೊಂಡಿವೆ. ಜತೆಗೆ ಪ್ರಪಂಚದ ಕಲೆ, ಸಾಹಿತ್ಯ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಆಚಾರ ವಿಚಾರ ತಿಳಿದುಕೊಳ್ಳಲು ಕನ್ನಡ ಭಾಷೆ ಅನುವು ಮಾಡಿಕೊಟ್ಟಿದೆ ಎಂದು ಅವರು
ಹೇಳಿದರು.

ಜಯ ಕರ್ನಾಟಕ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕೋಲಾರ ಜಿಲ್ಲೆ ಉದ್ಯಮಗಳ ಕ್ಷೇತ್ರವಾಗಿದ್ದು, ಇಲ್ಲಿಗೆ ಹೊರ ರಾಜ್ಯ ಮತ್ತು ದೇಶಗಳಿಂದ ಜನರು ವಲಸೆ ಬರುತ್ತಿದ್ದಾರೆ. ಇವರೆಲ್ಲರೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವ, ಮಾತನಾಡುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ’ ಎಂದು ಅವರು ಹೇಳಿದರು.

ಕನ್ನಡ ರಾಜ್ಯೋತ್ಸವ ಮತ್ತು ರಸ ಸಂಜೆ ಕಾರ್ಯಕ್ರಮದಲ್ಲಿ ಭರತನಾಟ್ಯ, ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಳಬಾಗಿಲು ನಗರದಲ್ಲಿ ಕನ್ನಡ ಭಾಷೆ, ನಾಡು, ನುಡಿಯಲ್ಲಿ ಸಾಧನೆ ಮಾಡಿದ ಆಟೊ ಚಾಲಕರನ್ನು ಸನ್ಮಾನಿಸಲಾಯಿತು.

ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಎಪಿಎಂಸಿ ನಿರ್ದೆಶಕರಾದ ವಿವೇಕಾನಂದಗೌಡ, ಗೊಲ್ಲಹಳ್ಳಿ ವೆಂಕಟೇಶ್, ನಗರಸಭೆ ಸದಸ್ಯ ಜಗನ್‍ಮೋಹನ್‍ರೆಡ್ಡಿ, ಕನ್ನಡ ಸಂಘದ ಅಧ್ಯಕ್ಷ ಈ.ಶ್ರೀನಿವಾಸಗೌಡ, ಕಾರ್ಯದರ್ಶಿ ಶಂಕರ್ ಕೇಸರಿ, ಕಾರ್ಯಕರ್ತರಾದ ನಂದಕಿಶೋರ್, ಶಕ್ತಿಪ್ರಸಾದ್, ಶಿವು, ಎಂ.ವಿ.ಜನಾರ್ಧನ್, ಎಂ.ಶಿವಣ್ಣ, ಸಿದ್ದಲಿಂಗಯ್ಯ, ಶಂಕರ್, ಆವಣಿ ಆನಂದ್, ಲೀಲಾ ಸೋಮಶೇಖರ್, ನೀರಾವರಿ ಹೋರಾಟ ಸಮಿತಿ ಸದಸ್ಯ ವೆಂಕಟೇಶ್, ಬಂಗಾರಪೇಟೆ ಕನ್ನಡ ಸಂಘದ ಕಾರ್ಯದರ್ಶಿ ರಂಗಮಾದಯ್ಯ, ಸೇಮಶೇಖರ್, ಹೇಮಂತ್‍ ಕುಮಾರ್ ಹಾಜರಿದ್ದರು.

ಕನ್ನಡಪರ ಸಂಘಟನೆಗೆ ಕೈ ಜೋಡಿಸಿ
ಹೋಟೆಲ್, ಅಂಗಡಿ ಮುಗ್ಗಟ್ಟು, ಕಾರ್ಖಾನೆ ಮೊದಲಾದ ಕಡೆಗಳಲ್ಲಿನ ನಾಮ ಫಲಕಗಳನ್ನು ಕನ್ನಡ ಭಾಷೆಯಲ್ಲಿ ಅಳವಡಿಸುವಂತೆ ಮಾಲೀಕರಿಗೆ ಓಲೈಕೆ ಮಾಡಬೇಕು. ಗಡಿ ಭಾಗದ ಗ್ರಾಮ ಹಾಗೂ ನಗರಗಳು ಕನ್ನಡಮಯವಾಗುವ ರೀತಿ ಇಲ್ಲಿನ ಜನರು ಕನ್ನಡಪರ ಸಂಘಟನೆಗಳಿಗೆ ಕೈ ಜೋಡಿಸಬೇಕು ಎಂದು ಜಯ ಕರ್ನಾಟಕ ಅಧ್ಯಕ್ಷ ತ್ಯಾಗರಾಜ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.