ADVERTISEMENT

ಕಳೆದು ಹೋಗುವ ಅಪಾಯದಲ್ಲಿ ‘ಕನ್ನಡ’

ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಆತಂಕ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 10:14 IST
Last Updated 9 ಏಪ್ರಿಲ್ 2018, 10:14 IST

ಕೋಲಾರ: ಕನ್ನಡಿಗರಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದ ಕನ್ನಡ ಕಳೆದುಹೋಗುವ ಅಪಾಯ ಕಾಣುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಡಾ.ಎಲ್.ಬಸವರಾಜು ಪ್ರತಿಷ್ಠಾನದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಳುಮನೆ ರಾಮದಾಸ್ ಅವರಿಗೆ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕನ್ನಡಿಗರು, ಅಧಿಕಾರಿಗಳು, ರಾಜಕಾರಣಿಗಳು ತಮಿಳಿಗರಂತೆ ಭಾಷೆಯ ಬಗೆಗಿನ ಇಚ್ಛಾಶಕ್ತಿ, ಬದ್ಧತೆ ತೊರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಮಿಳಿಗರಿಗೆ ಇರುವ ಭಾಷೆಯ ಬಗೆಗಿನ ಪ್ರೀತಿ, ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವ ವ್ಯವಸ್ಥೆ, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳಿಗೆ ಇರುವ ಬದ್ಧತೆ ನಮ್ಮ ರಾಜ್ಯದಲ್ಲಿ ಇಲ್ಲ. ಶೇ 95ರಷ್ಟು ಅಧಿಕಾರಿಗಳಿಗೆ ಬದ್ಧತೆ ಇಲ್ಲ. ಬೆಂಗಳೂರಿನಲ್ಲಿ ಶೇ 10ರಷ್ಟು ಮಾತ್ರ ಶಾಲೆಗಳಲ್ಲಿ ಕನ್ನಡ ಕಲಿಕೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಕನ್ನಡ ಭಾಷೆ ಸಾಹಿತ್ಯ ಲೋಕದಲ್ಲಿ ಎಲ್ಲ ಕ್ಷೇತ್ರದಲ್ಲೂ ಪಸರಿಸಿದೆ. ಎರಡು ವರ್ಷದ ಹಿಂದೆಯೇ ಕನ್ನಡದ ಕೀಲಿಮಣೆ ರಚನೆಯಾಗಿದೆ. ಆದರೆ ಕನ್ನಡದ ಜನ ಹಾಗೂ ಭಾಷೆ ಕಾಣೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕುವೆಂಪು ಅವರು ಮಲೆನಾಡಿನ ಬದುಕಿನ ಒಳಗೆ ಆಳವಾಗಿ ಬೇರುಬಿಟ್ಟಿರುವುದು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಇಂದು ಮಲೆನಾಡು ಭೌತಿಕವಾಗಿ ಅಂದಿನಂತೆ ಇಲ್ಲದಿದ್ದರೂ ಅವರ ಸಾಹಿತ್ಯದಲ್ಲಿ ಮಲೆನಾಡಿನ ವೈಭವ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕುವೆಂಪು ಅವರು ಮೈಸೂರಿನಲ್ಲಿ ಇದ್ದುಕೊಂಡು ಬಾಲ್ಯಾನುಭವದಲ್ಲಿಯೇ ಸಾಹಿತ್ಯ ರಚನೆ ಮಾಡಿದಂತೆ ಬೆಂಗಳೂರಿನಲ್ಲಿದ್ದರೂ ಮಲೆನಾಡಿನ ಉತ್ಕಟವಾದ ಜೀವಾನುಭವ ವಿಸ್ತರಿಸಿದ್ದು, ಕುವೆಂಪು ನಂತರ ಮಲೆನಾಡನ್ನು ಒಳಗಿನ ಕಣ್ಣುಗಳಿಂದ ನೋಡಿ ಅಮೂರ್ತವಾದ ಜಗತ್ತು ತೋರಿಸಿದವರು ಬಿಳುಮನೆ ರಾಮದಾಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುವೆಂಪು ತಮ್ಮ ಕೃಷಿಗಳಲ್ಲಿ ಅಲಕ್ಷಿತ ಜೀವಗಳನ್ನು ಉನ್ನತೀಕರಿಸುತ್ತಾ ಅವರ ಕಾಯಕ ಗೌರವಿಸಿದವರು. ರೈತನನ್ನು ಯೋಗಿಗೆ ಹೋಲಿಸಿ ಜಗತ್ತಿನ ಯಾವ ಕವಿಯು ಹಾಡು ಬರೆದಿದ್ದಿಲ್ಲ. ರೈತನ ಕಾಯಕವನ್ನು ಯೋಗಿತ್ವಕ್ಕೆ ಎತ್ತರಿಸಿದ ಕುವೆಂಪು ಅವರ ಮಹಾಕಥನಗಳಲ್ಲಿ ಬರುವ ಪಾತ್ರಗಳೆಲ್ಲವೂ ನಿಸರ್ಗಕ್ಕೆ ಅನುಗುಣವಾಗಿ ಬದುಕಿದ ಜೀವಿಗಳೇ ಆಗಿದೆ ಎಂದು ವಿವರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಳುಮನೆ ರಾಮದಾಸ್, ಕುವೆಂಪು ಅವರು ಮಹಾಕಾವ್ಯವನ್ನು ಬರೆಯದಿದ್ದರೆ ನಾನು ಸಾಹಿತ್ಯದ ಬರವಣಿಗೆ ಮಾಡುತ್ತಿರಲಿಲ್ಲ. ಹೀಗಾಗಿ ಕುವೆಂಪು ಅವರ ಸಾಹಿತ್ಯ ಕೃತಿಗಳ ಕುರಿತು ತಮ್ಮ ರಚನೆಗಳಲ್ಲಿ ಅಲ್ಲಲ್ಲಿ ವಿವರಣೆ ಕೊಟ್ಟು ಬರೆಯಲಾಗಿದೆ ಎಂದು ಹೇಳಿದರು.

ಸರ್ಕಾರಿ ಅಧಿಕಾರಿಯಾಗಿದ್ದಾಗ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳದ ಕಾರಣಕ್ಕೆ ಎರಡು ಬಾರಿ ವರ್ಗಾವಣೆಯಾಯಿತು. ಈ ಕಾರಣದಿಂದ ಕೋಲಾರದಲ್ಲೂ ವೃತ್ತಿ ತೆರಿಗೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿತು. ಡಾ.ಎಲ್.ಬಸವರಾಜು ಅವರ ಜತೆಗಿನ ಬಾಂಧವ್ಯ ಮೆಲುಕು ಹಾಕಿದರು.

ಬಿಳುಮನೆ ರಾಮದಾಸ್ ಅವರ ಬದುಕು ಬರಹಗಳ ಕುರಿತು ಮಾತನಾಡಿದ ಸಾಹಿತಿ ಡಾ.ವಿ.ಚಂದ್ರಶೇಖರ ನಂಗಲಿ ಮಾತನಾಡಿ, ಬಿಳುಮನೆ ಅವರ ಕತೆ, ಕಾದಂಬರಿಗಳಲ್ಲಿ ಕಾಣುವ ಚೇತನಗಳು ಗಾಯಗೊಂಡ ಯೋಧರಂತೆ. ಅತಿರಂಜಿಕ, ಕಾಲ್ಪನಿಕ ಬರಹಗಳಲ್ಲ, ಬದುಕಿಗೆ ಕನ್ನಡಿ ಹಿಡಿದ ಕೃತಿಗಳು, ಪರಿವರ್ತನೆ ಬಯಸುತ್ತದೆ ಎಂದರು.

ಬದುಕಿನ ವೈವಿಧ್ಯ ಹೇಳುವಲ್ಲಿ ಸಿದ್ಧಹಸ್ತರು. ಬಿಳುಮನೆ ರಾಮದಾಸ್ ಮಿಂಚುಳ್ಳಿ ಪ್ರಜ್ಞೆಯ ಲೇಖಕರಾಗಿದ್ದಾರೆ. ಅವರು ಕೇವಲ ಬರಹಗಾರರಲ್ಲ, ಅವರೊಬ್ಬ ನಟ, ಮಿಮಿಕ್ರಿಯ ಮೂಲಕ ಕಾದಂಬರಿಗಳ ಹಲವು ದೃಶ್ಯ ಅಭಿನಯಿಸುವ ಕಲೆಯೂ ಇತ್ತು ಎಂದು ವಿವರಿಸಿದರು.

ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಡಾ.ಎಲ್‌.ಬಸವರಾಜು ಪ್ರತಿಷ್ಠಾನದ ಕಾರ್ಯದರ್ಶಿ ಎಚ್.ಎ.ಪುರುಷೋತ್ತಮರಾವ್ ಹಾಜರಿದ್ದರು.

**

ಕನ್ನಡದ ಜನ ಬೆಂಗಳೂರಿನಲ್ಲಿ ಕಾಣೆಯಾಗುತ್ತಿದ್ದು, ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇ 35ರಷ್ಟು ಮಂದಿ ಇರುವ ಕನ್ನಡಿಗರೂ ಕನ್ನಡ ಮಾತನಾಡುತ್ತಿಲ್ಲ – – ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ.

**
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.