ADVERTISEMENT

ಕಾಂಗ್ರೆಸ್‌ಗೆ ಜೆಡಿಎಸ್ ಏಕೈಕ ಎದುರಾಳಿ

ಕೋಲಾರ ವಿಧಾನಸಭಾ ಕ್ಷೇತ್ರ: ಯಲವಾರ ಗ್ರಾಮದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:09 IST
Last Updated 6 ಏಪ್ರಿಲ್ 2013, 9:09 IST

ಕೋಲಾರ: ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಮರ್ಥ ಎದುರಾಳಿ ಎಂದರೆ ಜೆಡಿಎಸ್ ಒಂದೇ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ನಸೀರ್ ಅಹ್ಮದ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಯಲವಾರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸುದೀರ್ಘ ಇತಿಹಾಸವಿದೆ. ಕಾರ್ಯಕರ್ತರ ಬೆಂಬಲವಿದೆ. ಇಂಥ ಸಂದರ್ಭದಲ್ಲಿ ಪಕ್ಷಕ್ಕೆ ಜೆಡಿಎಸ್ ಮಾತ್ರವೇ ಸಮರ್ಥ ಎದುರಾಳಿಯೇ ಹೊರತು ಬೇರಾರೂ ಅಲ್ಲ ಎಂದರು.

ಕ್ಷೇತ್ರಕ್ಕೆ ಒಬ್ಬ ಉತ್ತಮ ಜನಪ್ರತಿನಿಧಿ ಬೇಕು, ಕಾಂಗ್ರೆಸ್‌ಗೆ ಗೆಲವೂ ದಕ್ಕಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿ ಬಂದು ಕಾರ್ಯಕರ್ತರು ಮತ್ತು ಮುಖಂಡರು ಒತ್ತಡ ಹೇರಿದ್ದರಿಂದ ಚುನಾವಣೆಗೆ ಸ್ಪರ್ಧಿಸಲು ಒಪ್ಪಿರುವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ ಮೇರೆಗೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ತಮಗೆ ಮತ್ತು ಪಕ್ಷಕ್ಕೆ ಜೆಡಿಎಸ್ ಅನ್ನು ಮಣಿಸುವ ಸವಾಲು ಮಾತ್ರವೇ ದೊಡ್ಡದಾಗಿ ಕಾಣುತ್ತಿದೆ ಎಂದರು.

ಜೆಡಿಎಸ್ ಮತ್ತು ವರ್ತೂರು ಪ್ರಕಾಶರು ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ತಡವಾಗಿ ಸಿದ್ಧವಾಗಿದೆಯಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ತಿಂಗಳೊಳಗೆ ಈ ಕೊರತೆ ತುಂಬಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಜಿಲ್ಲೆಯಲ್ಲಿ ರೈತರ ಸಮಸ್ಯೆ ಮಿತಿ ಮೀರಿದೆ. ಬೆಂಬಲ ಬೆಲೆಗಳಿಗಾಗಿ ಆಗ್ರಹಿಸುವ ಸನ್ನಿವೇಶಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ದೊರೆತರೆ ಇಡೀ ರಾಜ್ಯದ ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ನುಡಿದರು.

ನಂತರ ಮುಖಂಡರೊಡನೆ ಅವರು ನಗರಕ್ಕೆ ಬಂದು ಗಾಂಧಿವನದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ, ಬಂಗಾರಪೇಟೆ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮೆಥೋಡಿಸ್ಟ್ ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಅಪ್ನಾಘರ್ ಸಭಾಂಗಣಕ್ಕೆ ತೆರಳಿ ಮುಖಂಡರೊಡನೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್, ಉಪಾಧ್ಯಕ್ಷ ಸಿ.ಗಂಗಾಧರ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೈ.ಶಿವಕುಮಾರ್, ವಿ.ಶ್ರೀನಿವಾಸ್, ಅಂಚೆ ಅಶ್ವಥ್, ಯುವರಾಜ್, ಗೋವಿಂದಸ್ವಾಮಿ, ಕೆ.ಜಯದೇವ್, ಯಲವಾರ ರವಿ, ಮಣಿ, ಗುಪ್ತಾ, ಟಿ.ವಿ.ಭಾರತಿ, ವಿ.ವೆಂಕಟಮುನಿಯಪ್ಪ, ಅಬ್ದುಲ್ ಖಯ್ಯೂಂ, ನಗರಸಭೆ ಸದಸ್ಯ ಎಸ್.ರಮೇಶ್, ಚೆಂಗೋಲಿ ನಾರಾಯಣಸ್ವಾಮಿ, ಉದಯಕುಮಾರ್, ಲಾಲ್‌ಬಹದೂರ್ ಶಾಸ್ತ್ರಿ, ಡಾ.ಎಂ.ಚಂದ್ರಶೇಖರ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ನನಗೆ ಎದುರಾಳಿ ಇಲ್ಲ: ವರ್ತೂರು ಪ್ರಕಾಶ್
ಕೋಲಾರ: ಪ್ರಸ್ತುತ ಕೋಲಾರ ವಿಧಾನಸಭೆ ಕ್ಷೇತ್ರದ ಚುನಾವಣಾ ಕಣದಲ್ಲಿ ತಮ್ಮ ವಿರುದ್ಧ ಯಾರೂ ಪ್ರಬಲ ಎದುರಾಳಿಗಳಿಲ್ಲ ಎಂದು ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದರು.


ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಈಚೆಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಷ್ಟೇ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಇನ್ನೂ ಗೊಂದಲವಿದೆ. ಹಾಗಾಗಿ ತಮಗಿನ್ನು ಸಮರ್ಥ ಎದುರಾಳಿಗಳಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT