ADVERTISEMENT

ಕಾವೇರಿ ಕೋಲಾಹಲಕ್ಕೆ ಕರಗಿದ ಕೋಲಾರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:25 IST
Last Updated 7 ಅಕ್ಟೋಬರ್ 2012, 7:25 IST

ಕೋಲಾರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಒಕ್ಕೂಟವು ನೀಡಿದ್ದ ಬಂದ್ ಕರೆಗೆ ಸಾರ್ವಜನಿಕರು, ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಪ್ರತಿಕ್ರಿಯಿಸಿದರು.ಎಲ್ಲ ವಹಿವಾಟು ಜಿಲ್ಲೆಯಾದ್ಯಂತ ಸ್ಥಗಿತಗೊಂಡಿದ್ದವು.

ಬಂದ್‌ಗೆ ಬೆಂಬಲ ನೀಡಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಾದ್ಯಂತ ಸಂಚರಿಸಿ ತಮಿಳುನಾಡಿನ ವಿರುದ್ಧ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ, ಅಸಮಾಧಾನ ಹೊರ ಹಾಕಿದರು.

ಯಾವುದೇ ಅಹಿತಕರ ಘಟನೆ ನಡೆಯದೆ ಬೆಳಿಗ್ಗೆಯಿಂದ ಸಂಜೆವರೆಗೂ ಬಂದ್ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಆಟೋರಿಕ್ಷಾಗಳ ಸಂಚಾರ ಇತ್ತು. ಬಸ್‌ಗಳ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು. ಬ್ಯಾಂಕ್‌ಗಳಿಗೂ ರಜೆ ಘೋಷಿಸಲಾಯಿತು. ಶಾಲೆ, ಕಾಲೇಜುಗಳಿಗೆ ಮುಂಚೆಯೇ ರಜೆ ಘೋಷಿಸಲಾಗಿತ್ತು.

ಪೆಟ್ರೋಲ್ ಬಂಕ್‌ಗಳು ಮತ್ತು ಎಲ್‌ಪಿಜಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸಲಿಲ್ಲ.  ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದರೂ ಎಂದಿನ ಜನ ಭೇಟಿ ಇರಲಿಲ್ಲ. ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆ: ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪ್ರತ್ಯೇಕವಾಗಿ ನಗರದಲ್ಲಿ ಸಂಚರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಬೈಕ್ ರ‌್ಯಾಲಿ ನಡೆಸಿ ಕೆಲವು ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದರು. ನಗರದ ಹೊಸ ಬಸ್ ನಿಲ್ದಾಣ, ಗಾಂಧಿವನ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಾರ್ಯಾಗಾರ, ಹಳೇಬಸ್ ನಿಲ್ದಾಣಗಳಲ್ಲಿ ಜನ ಕಡಿಮೆ ಇದ್ದರು. ಎಲ್ಲ ಕಡೆಯೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿ ಕಾರ್ಯಕರ್ತರು ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ಸುಟ್ಟರು. ಅದಕ್ಕೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ಮಾನವ ಸರಪಳಿ ರಚಿಸಿದರು. ವೃತ್ತದಲ್ಲಿ ಟೈರ್‌ಗೆ ಬೆಂಕಿ ಇಡುವ ಪ್ರಯತ್ನವನ್ನು ಪೊಲೀಸರು ತಡೆದರು.

ಜಯ ಕರ್ನಾಟಕ: ನಗರದ ಗಾಂಧಿವನದಲ್ಲಿ ಧರಣಿ ನಡೆಸಿದ ಜಯಕರ್ನಾಟಕ ಸಂಘಟನೆಯ ಪ್ರಮುಖರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅ.5ರಿಂದ ಕೆಆರ್‌ಎಸ್‌ನ 24 ಕ್ರಸ್ಟ್ ಗೇಟುಗಳನ್ನು ತೆರೆದು 40 ಸಾವಿರ ಕ್ಯೂಸೆಕ್ ನೀರು ಬಿಡುತಿದ್ದು ರಾಜ್ಯ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕಿದೆ. ಕಾವೇರಿ ನದಿ ಪ್ರಾಧಿಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಅಧ್ಯಕ್ಷ ಕೆ.ಆರ್. ತ್ಯಾಗರಾಜ್ ಮುಖಂಡರಾದ ಶ್ರೀನಿವಾಸ ಮೂರ್ತಿ, ಬಿ.ಎಸ್.ಪ್ರಸಾದ್, ಜಿ.ವೆಂಕಟಾಚಲಪತಿ, ಎಸ್.ರಾಮಚಂದ್ರಯ್ಯ, ಮಂಜುನಾಥರಾವ್, ವೆಂಕಟಪ್ಪ, ಅಂಜಿನಪ್ಪ, ಎನ್.ಮಂಜುನಾಥ್, ಸಿ.ಆರ್. ಬಾಬು, ಎಸ್. ನಾಗರಾಜ್, ಕೆ.ಸಿ. ವಿನೋದ, ಸಿ. ರಾಕೇಶ್, ಬಾಲಾಜಿ, ಟಿ.ವಿ. ಜಗದೀಶ್, ಬಿ.ರಾಮ್ ಸಿಂಗ್, ಜಿ.ಸುರೇಶ್ ಬಾಬು, ಕೆ.ಎಂ.ಗೋವಿಂದರಾಜು, ವಿ.ಸುರೇಶ್. ಬಾಲು, ನಾಗರಾಜ್, ಆನಂದ್, ಗಂಗಾಧರ್, ಗಿರೀಶ್, ಪ್ರಕಾಶ್ ಬಾಬು, ಶಿವಕುಮಾರ್, ನಾಗರಾಜ್,ಆನಂದ್, ಶ್ರೀನಿವಾಸ್, ಸುನಿಲ್, ಮನು, ಸುಬ್ರಮಣಿ,  ಎಸ್.ಸುನಿಲ್ ಇದ್ದರು.


ಹಸಿರು ಸೇನೆ: ಬಂದ್ ಪ್ರಯುಕ್ತ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರೈತಸಂಘ- ಹಸಿರು ಸೇನೆಯ ಪ್ರಮುಖರು ಅಬ್ಬಣಿ ಶಿವಪ್ಪ ನೇತೃತ್ವದಲ್ಲಿ ಧರಣಿ ನಡೆಸಿದರು.  ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ರ‌್ಯಾಲಿ ನಡೆಸಿದ ಕಾರ್ಯಕರ್ತರು ತಮಿಳುನಾಡು, ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೆಳಿಗ್ಗೆ 8ರ ವೇಳೆಗೆ ಪ್ರಯಾಣಿಕರನ್ನು ಒಳಗೊಂಡ ಬಸ್‌ಗಳನ್ನು ಕಾರ್ಯಕರ್ತರು ತಡೆದು ವಿಭಾಗೀಯ ಕಾರ್ಯಾಗಾರಕ್ಕೆ ವಾಪಸ್ ಕಳಿಸಿದರು.

ಈ ಸಂದರ್ಭದಲ್ಲಿ ಪೊಲೀಸರೊಡನೆ ಮತ್ತು ನಿಲ್ದಾಣದ ಅಧಿಕಾರಿಗಳೊಡನೆ ವಾಗ್ವಾದ ನಡೆಸಿದರು.  ನಗರದಿಂದ ಬಂಗಾರಪೇಟೆಗೆ ತೆರಳುವ ರೈಲು ತಡೆಯುವ ಅವರ ಪ್ರಯತ್ನವನ್ನು ಪೊಲೀಸರು ತಡೆದರು.  

ಮುಖಂಡರಾದ ಗಣೇಶಗೌಡ, ಜಿ.ಎನ್.ಸ್ವಾಮಿ, ಜಗದೀಶಗೌಡ ನೇತೃತ್ವ ವಹಿಸಿದ್ದರು.
ಧ್ವನಿವರ್ಧಕ ಮಾಲೀಕರ ಸಂಘದವರು ಬಂದ್‌ಗೆ ಬೆಂಬಲ ಸೂಚಿಸಿ ನಗರದ ಪ್ರವಾಸಿ ಮಂದಿರದ ಮುಂದೆ ಧರಣಿ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT