ADVERTISEMENT

ಕುಡಿಯುವ ನೀರಿಗೆ ಮೊದಲ ಆದ್ಯತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 6:45 IST
Last Updated 19 ಜನವರಿ 2011, 6:45 IST

ಶ್ರೀನಿವಾಸಪುರ: ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುವುದು. ಪಂಪ್ ಹೌಸ್ ಸಮೀಪ ತೊಟ್ಟಿ ನಿರ್ಮಿಸಿ ಪಟ್ಟಣದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭಾ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ ಹೇಳಿದರು.

ಪಟ್ಟಣದ ಮಹಾತ್ಮಾಗಾಂಧಿ ಸ್ಮಾರಕ ಪುರಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪಾದಚಾರಿಗಳ ರಸ್ತೆ ಆಕ್ರಮಿಸಿಕೊಳ್ಳುವ ಅಂಗಡಿ ಮುಂಗಟ್ಟನ್ನು ತೆರವುಗೊಳಿಸಲು, ರಾಜಕಾಲುವೆಗೆ ಕಾಯಕಲ್ಪ ಕಲ್ಪಿಸಲು ಮತ್ತು ಮಹಾತ್ಮಾಗಾಂಧಿ ರಸ್ತೆಯ ವಿಸ್ತರಣೆಗೆ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ಕೈಗೊಳ್ಳಬಾರದು. ಹಗಲು ಹೊತ್ತಿನಲ್ಲೂ ಉರಿಯುವ ಬೀದಿ ದೀಪ ಆರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಪೂರೈಕೆಗಾಗಿ ಕೊರೆಯಲಾಗಿರುವ ಕೊಳವೆ ಬಾವಿಗಳ ನಿರ್ವಹಣೆ ಉತ್ತಮಪಡಿಸಬೇಕು ಎಂದು ಸದಸ್ಯರಿಂದ ಸಲಹೆ ಬಂದಾಗ, ಆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಪುರಸಭೆ ಆಡಳಿತ, ಅಭಿವೃದ್ಧಿ ಕಾಮಗಾರಿ, ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಮತ್ತಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು. ಸದಸ್ಯರಾದ ರಾಜೇಂದ್ರ ಪ್ರಸಾದ್, ಎನ್.ವೆಂಕಟೇಶ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ನಯಾಜ್ ಪಾಷ, ಮುಖ್ಯಾಧಿಕಾರಿ ಜಗದೀಶ್, ಆರೋಗ್ಯಾಧಿಕಾರಿ ನವೀನ್ ಚಂದ್ರ, ಯೋಜನಾಧಿಕಾರಿ ಸುರೇಶ್ ಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ತರಬೇತಿ
ಕೋಲಾರ: ನಗರದ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ 3ನೇ ಪಾಳಿಯಲ್ಲಿ ಫೆಬ್ರುವರಿ-2011ನೇ ಸಾಲಿನಲ್ಲಿ ತರಬೇತಿ ನೀಡಲಾಗುವುದು. ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಯಲ್ಲಿ ತರಬೇತಿ ಪಡೆಯಲು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ರೂ.20 ಪಾವತಿಸಿ ಅರ್ಜಿಗಳನ್ನು ಸಂಸ್ಥೆಯಲ್ಲಿ ಪಡೆದು, ಭರ್ತಿ ಮಾಡಿ ಜ.29ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಪ್ರಾಚಾರ್ಯರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.