ADVERTISEMENT

ಕೊನೆಗೂ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 8:10 IST
Last Updated 3 ಜೂನ್ 2011, 8:10 IST
ಕೊನೆಗೂ ಒತ್ತುವರಿ ತೆರವು
ಕೊನೆಗೂ ಒತ್ತುವರಿ ತೆರವು   

ಕೆಜಿಎಫ್: ರಾಬರ್ಟ್‌ಸನ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಖಾಸಗಿ ವ್ಯಕ್ತಿಗಳು ಕಲ್ಲು ಚಪ್ಪಡಿ ನೆಟ್ಟು ಒತ್ತುವರಿ ಮಾಡಿಕೊಂಡಿದ್ದನ್ನು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.

ಕಾರ್ಯಾಚರಣೆಯ ಸುಳಿವನ್ನು ಯಾರಿಗೂ ಕೊಡದ ನಗರಸಭೆ ಬೆಳಿಗ್ಗೆ ತನ್ನ ಎಲ್ಲಾ ಸಿಬ್ಬಂದಿ ಹಾಗೂ ಜೆಸಿಬಿ ಯಂತ್ರದೊಂದಿಗೆ ತೆರಳಿ ಏಕಾಏಕಿ ಕಾರ್ಯಾಚರಣೆಯಲ್ಲಿ ತೊಡಗಿತು.

ಈ ಮುನ್ನ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಮೀಷನರ್ ಪೆದ್ದಪ್ಪಯ್ಯ ಅವರು ನಗರಸಭೆ ಅಧ್ಯಕ್ಷ ಪಿ.ದಯಾನಂದ್, ಡಿವೈಎಸ್ಪಿ ಕೆ.ಶೇಷಾದ್ರಿ ಜತೆಗೆ ಮಾತುಕತೆ ನಡೆಸಿ ಕಾರ್ಯಾಚರಣೆಗೆ ಅಗತ್ಯ ಏರ್ಪಾಟುಗಳನ್ನು ಮಾಡಿದರು.

ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದ ಕಾರ್ಯಾಚರಣೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಕಾರ್ಯಾಚರಣೆ ನೋಡಲು ಸಾವಿರಾರು ಜನ ಸ್ಥಳಕ್ಕೆ ಆಗಮಿಸಿದ್ದರು.

ನಗರಸಭೆಯ ಸ್ವತ್ತನ್ನು ಕಂದಾಯ ಅಧಿಕಾರಿಗಳ ತಪ್ಪಿನಿಂದಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ನಗರಸಭೆ ಆಸ್ತಿಯನ್ನು ಕಬಳಿಸಲು ಭೂ ಮಾಫಿಯಾಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಒತ್ತುವರಿ ಮಾಡಿದ ವ್ಯಕ್ತಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ಶಾಲೆ ಪ್ರಾರಂಭವಾದ ಏಳು ದಶಕಗಳಿಂದ ಶಾಲೆಯ ವಶದಲ್ಲೇ ಇದ್ದ ಮೈದಾನಕ್ಕೆ ಇತ್ತೀಚೆಗೆ ಖಾಸಗಿ ವ್ಯಕ್ತಿಗಳು ರಾತ್ರೋರಾತ್ರಿ ಕಲ್ಲುಚಪ್ಪಡಿ ಹಾಕಿ ಒತ್ತುವರಿ ಮಾಡಿಕೊಂಡಿದ್ದರು.
 
ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.