ADVERTISEMENT

ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2015, 9:21 IST
Last Updated 31 ಅಕ್ಟೋಬರ್ 2015, 9:21 IST

ಕೋಲಾರ: ನಗರದ ಇತಿಹಾಸ ಪ್ರಸಿದ್ಧ ಕೋಲಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಕಾಣಿಕೆ ಹುಂಡಿ ಪ್ರತಿಷ್ಠಾಪಿಸಲು ಮುಂದಾದ ಜಿಲ್ಲಾಧಿಕಾರಿಗಳಿಗೆ ಅರ್ಚಕ ಸಮುದಾಯ ಅಡ್ಡಿಪಡಿಸಿ, ಗರ್ಭಗುಡಿಗೆ ಬೀಗ ಜಡಿದು ಪೂಜೆ ಸ್ಥಗಿತಗೊಳಿಸಿದೆ.

ಹೈಕೋರ್ಟ್‌ ಆದೇಶದಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ದೇವಾಲಯದಲ್ಲಿ ಮಧ್ಯಾಹ್ನ ಹುಂಡಿ ಪ್ರತಿಷ್ಠಾಪಿಸಲು ಬಂದಿದ್ದರು.

ಈ ವೇಳೆ ದೇವಸ್ಥಾನದಲ್ಲಿ ಪೂಜಾ ಕಾರ್ಯದಲ್ಲಿ ನಿರತರಾಗಿದ್ದ ಅರ್ಚಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಅಲ್ಲದೇ, ಹುಂಡಿಯನ್ನು ದೇವಸ್ಥಾನದಿಂದ ಹೊರಗೆ ತಳ್ಳಲು ಯತ್ನಿಸಿದರು. ಈ ಹಂತದಲ್ಲಿ ಅರ್ಚಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಅರ್ಚಕ ಸಮುದಾಯದ ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ಪೊಲೀಸ್‌ ಭದ್ರತೆಯೊಂದಿಗೆ ಗರ್ಭಗುಡಿ ಮುಂಭಾಗದಲ್ಲಿ ಹುಂಡಿ ಪ್ರತಿಷ್ಠಾಪಿಸಿದರು.

ಇದರಿಂದ ಅಸಮಾಧಾನಗೊಂಡ ಅರ್ಚಕರು ಪೂಜಾ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಗರ್ಭಗುಡಿಗೆ ಬೀಗ ಹಾಕಿದರು. ನಂತರ ದೇವಾಲಯದ ಪ್ರವೇಶದ್ವಾರದಲ್ಲಿ ಧರಣಿ ಕುಳಿತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ವಂಶಪಾರಂಪರ್ಯವಾಗಿ  ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದೇವೆ. ನಮಗೆ ಸರ್ಕಾರದಿಂದ ವೇತನ ಬರುತ್ತಿಲ್ಲ. ಭಕ್ತರು ಮಂಗಳಾರತಿ ತಟ್ಟೆಗೆ ಹಾಕುವ ಹಣದಲ್ಲೇ ಜೀವನ ಸಾಗಿಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಹುಂಡಿ ಪ್ರತಿಷ್ಠಾಪಿಸಿ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ’ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ್‌ ದೀಕ್ಷಿತ್‌ ದೂರಿದರು.

‘ಕೋಲಾರಮ್ಮ ದೇವಸ್ಥಾನವು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ರಾಜ್ಯ ಸರ್ಕಾರದ  ಮುಜರಾಯಿ ಇಲಾಖೆಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಮುಜರಾಯಿ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎಂಟು ಮಂದಿ ಅರ್ಚಕರು ಈ ವೃತ್ತಿಯನ್ನೇ ನಂಬಿಕೊಂಡಿದ್ದೇವೆ. ಅಧಿಕಾರಿಗಳು ಏಕಾಏಕಿ ಹುಂಡಿ ಪ್ರತಿಷ್ಠಾಪಿಸಿದರೆ ಜೀವನ ನಿರ್ವಹಣೆಗೆ ನಾವು ಏನು ಮಾಡಬೇಕು. ಮಕ್ಕಳನ್ನು ಹೇಗೆ ಸಾಕುವುದು’ ಎಂದು ಅರ್ಚಕ ಸೋಮೇಶ್ವರ ದೀಕ್ಷಿತ್‌ ಅಳಲು ತೋಡಿಕೊಂಡರು.

ಹೈಕೋರ್ಟ್‌್ ಆದೇಶ: ‘ಕೋಲಾರಮ್ಮ ಹಾಗೂ ಸೋಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ ಅಧೀನದಲ್ಲಿವೆ. ಜಿಲ್ಲಾಡಳಿತದ ವತಿಯಿಂದ ಎಂಟು ವರ್ಷಗಳ ಹಿಂದೆಯೇ ಕೋಲಾರಮ್ಮ ದೇವಸ್ಥಾನದಲ್ಲಿ ಹುಂಡಿ ಪ್ರತಿಷ್ಠಾಪಿಸಲಾಗಿತ್ತು. ನಂತರ ಅರ್ಚಕರು ಹುಂಡಿ ತೆರವುಗೊಳಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌್ ಹುಂಡಿ ಪ್ರತಿಷ್ಠಾಪಿಸುವಂತೆ ಇತ್ತೀಚೆಗೆ ಆದೇಶ ನೀಡಿದೆ. ಈ ಆದೇಶದಂತೆ ಹುಂಡಿ ಪ್ರತಿಷ್ಠಾಪಿಸಲಾಗಿದೆ’ ಎಂದು ತ್ರಿಲೋಕಚಂದ್ರ ಸುದ್ದಿಗಾರರಿಗೆ ತಿಳಿಸಿದರು.

ದೇವಸ್ಥಾನಕ್ಕೆ ಅರ್ಚಕರನ್ನು ಮುಜರಾಯಿ ಇಲಾಖೆಯಿಂದ ನೇಮಕ ಮಾಡಿಲ್ಲ. ಅವರಿಗೆ ತೊಂದರೆಯಾಗಿದ್ದರೆ ಕಾನೂನು ಹೋರಾಟ ನಡೆಸಲಿ. ಹೈಕೋರ್ಟ್‌ನ ಆದೇಶ ಪಾಲನೆಗೆ ಅಡ್ಡಿಪಡಿಸಿರುವ ಹಾಗೂ ಗರ್ಭಗುಡಿಗೆ ಬೀಗ ಹಾಕುವ ಮೂಲಕ ಆಗಮಶಾಸ್ತ್ರ ಉಲ್ಲಂಘಿಸಿರುವ ಅರ್ಚಕರಿಗೆ ನೋಟಿಸ್‌ ಕೊಟ್ಟು ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ದರ್ಶನ ಭಾಗ್ಯವಿಲ್ಲ: ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಇದ್ದ ಕಾರಣ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಆದರೆ, ಅರ್ಚಕರು ಗರ್ಭಗುಡಿಗೆ ಬೀಗ ಹಾಕಿದ್ದರಿಂದ ಭಕ್ತರಿಗೆ ದೇವರ ದರ್ಶನ ಭಾಗ್ಯ ಸಿಗಲಿಲ್ಲ. ಭಕ್ತರು ಸಂಜೆವರೆಗೆ ಕಾದರೂ ಅರ್ಚಕರು ಗರ್ಭಗುಡಿಯ ಬಾಗಿಲು ತೆಗೆಯಲಿಲ್ಲ. ಹೀಗಾಗಿ ಭಕ್ತರೇ ಗರ್ಭಗುಡಿ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದ ದೃಶ್ಯ ಕಂಡುಬಂತು.

ಹುಂಡಿಯ ರಕ್ಷಣೆಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದಲ್ಲಿ ಸಿ.ಸಿಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೋಲಾರಮ್ಮ ದೇವಾಲಯದ ಸಮೀಪವೇ ಇರುವ ಸೋಮೇಶ್ವರ ದೇವಸ್ಥಾನದಲ್ಲೂ ಅಧಿಕಾರಿಗಳು ಹುಂಡಿ ಪ್ರತಿಷ್ಠಾಪನೆ ಮಾಡಿದರು. ಈ ದೇವಾಲಯದಲ್ಲಿ ಅರ್ಚಕರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.