ADVERTISEMENT

ಕೋಲಾರಮ್ಮ ರಥ ಎಳೆದ ಭಕ್ತೆಯರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 8:27 IST
Last Updated 25 ಮಾರ್ಚ್ 2014, 8:27 IST
ಕೋಲಾರದ ಕೋಟೆ ಬಡಾವಣೆಯಲ್ಲಿ ಸೋಮವಾರ ನಡೆದ ಕೋಲಾರಮ್ಮ ರಥೋತ್ಸವದಲ್ಲಿ ಮಹಿಳೆಯರು ರಥ ಎಳೆದು ಹರಕೆ ತೀರಿಸಿದರು.
ಕೋಲಾರದ ಕೋಟೆ ಬಡಾವಣೆಯಲ್ಲಿ ಸೋಮವಾರ ನಡೆದ ಕೋಲಾರಮ್ಮ ರಥೋತ್ಸವದಲ್ಲಿ ಮಹಿಳೆಯರು ರಥ ಎಳೆದು ಹರಕೆ ತೀರಿಸಿದರು.   

ಕೋಲಾರ: ನಗರದ ಕೋಟೆ ಬಡಾವಣೆ­ಯಲ್ಲಿ ಸೋಮವಾರ ಕೋಲಾರಮ್ಮ ರಥೋತ್ಸವ ಭಕ್ತಿ–ಶ್ರದ್ಧೆಯಿಂದ ನಡೆ­ಯಿತು.ನಗರದ ವಿವಿಧ ಬಡಾವಣೆ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಅಪಾರ ಸಂಖ್ಯೆ ಭಕ್ತೆಯರು ರಥವನ್ನು ಎಳೆದು ತಮ್ಮ ಹರಕೆ ತೀರಿಸಿದರು.

ಮಧ್ಯಾಹ್ನ 12 ಗಂಟೆ ಬಳಿಕ ರಥ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡ­ಲಾಯಿತು. ಮಧ್ಯಾಹ್ನ 1.30ರ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭ­ದಲ್ಲಿ ನೆರೆದಿದ್ದವರು ಕೋಲಾ­ರಮ್ಮ­ನಿಗೆ ಜೈಕಾರ ಕೂಗಿದರು. ಸುಡು ಬಿಸಿಲಾದರೂ ಲೆಕ್ಕಿಸದೆ ಮಹಿಳೆಯರು ರಥೋತ್ಸವದಲ್ಲಿ ಪಾಲ್ಗೊಂಡರು.

ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ರಥ ಸಂಚರಿಸಿದ ಸಂದರ್ಭದಲ್ಲಿ ನೀರು ಹಾಕಿ, ಸಾರಿಸಿ, ರಂಗೋಲಿ ಇಟ್ಟು ಮಹಿಳೆಯರು ಸ್ವಾಗತಿಸಿದರು. ಪ್ರಮುಖ ವೃತ್ತಗಳಲ್ಲಿ ನಿಂತ ರಥಕ್ಕೆ ಸುತ್ತಮುತ್ತಲಿನ ನಿವಾಸಿಗಳು ಪೂಜೆ ಸಲ್ಲಿಸಿದರು. ಮಧ್ಯಾಹ್ನ 3.30ರ ವರೆಗೂ ಸಂಚರಿಸಿದ ರಥ ಮತ್ತೆ ದೇವಾಲಯವನ್ನು ಸೇರಿದ ಬಳಿಕ ಉತ್ಸವ ಕೊನೆಗೊಂಡಿತು. ಬೆಳಿಗ್ಗೆ­ಯಿಂದ ರಾತ್ರಿವರೆಗೂ ಅಪಾರ ಸಂಖ್ಯೆ ಭಕ್ತರು ಭೇಟಿ ನೀಡಿ­ದರು.

ಕೋಲಾರಮ್ಮ ದೇವಿಯ ರಥೋ­ತ್ಸವದ ಅಂಗವಾಗಿ ಡೂಂಲೈಟ್ ವೃತ್ತ­ದಲ್ಲಿನ ಕೋಲಾರಮ್ಮ ಆಟೊ ಚಾಲಕರ ಸಂಘದ ಸದಸ್ಯರು ಭಕ್ತರಿಗೆ ಮಜ್ಜಿಗೆ, ಹೆಸರುಬೇಳೆ ಪ್ರಸಾದವನ್ನು ವಿತರಿ­ಸಿದರು.

ವೃತ್ತದಲ್ಲಿ ಕೋಲಾರಮ್ಮ ದೇವಿಯ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡ­ಲಾಯಿತು. ನಗರ ಸರ್ಕಲ್ ಇನ್‌­ಸ್ಪೆಕ್ಟರ್‌ ಶಿವಕುಮಾರ್‌, ಸಬ್ ಇನ್‌­ಸ್ಪೆಕ್ಟರ್‌ ಸುಧಾಕರರೆಡ್ಡಿ, ಶ್ರೀರಾಂ, ಸಂಘದ ಪದಾಧಿಕಾರಿಗಳಾದ ಮುನಿ­ವೆಂಕಟಪ್ಪ, ನರೇಂದ್ರಬಾಬು, ನಾರಾ­ಯಣ­ಸ್ವಾಮಿ, ರಮೇಶ್ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.