ADVERTISEMENT

ಖಾತ್ರಿ ಕೂಲಿ ಹೆಚ್ಚಳ: ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 7:40 IST
Last Updated 18 ಏಪ್ರಿಲ್ 2012, 7:40 IST

ಕೋಲಾರ: ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವವರಿಗೆ ಕೂಲಿ ಹಣವನ್ನು ಹೆಚ್ಚಿಸುವ ಸುಪ್ರೀಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಜಿ.ಸಿ.ಬೈಯಾರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ಕೂಲಿ 150 ರೂಪಾಯಿ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮುನ್ನ ಅದೇ ಅಂಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇದು ಉದ್ಯೋಗಖಾತ್ರಿ ಜಾರಿ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ ಸಂಘಟನೆಗಳ ಹೋರಾಟಕ್ಕೆ ಸಂದ ಜಯ ಎಂದು ಅವರು ಹೇಳಿದರು.

ಧರಣಿ: ಜಿಲ್ಲೆಯಲ್ಲಿ 2009-10ರ ಸಾಲಿನ ಯೋಜನೆ ಅಡಿ ಕೆಲಸ ಮಾಡಿದವರ ಬಾಕಿ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ನೀಡದಿದ್ದರೆ ಏ.25ರಂದು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕೆಲಸಕ್ಕೆ ಆಗ್ರಹ: ಬರಗಾಲ ಘೋಷಣೆಯಾಗಿರುವುದರಿಂದ ಜಿಲ್ಲೆಯಲ್ಲಿ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವವರಿಗೆ ಈಗಿರುವಂತೆ 100 ದಿನದ ಕೆಲಸದ ಜೊತೆಗೆ ಇನ್ನೂ 100 ದಿನ ಹೆಚ್ಚುವರಿ ಕೆಲಸವನ್ನು ನೀಡಬೇಕು.
 
ಫಾರಂ ನಂ. 6 ಸಲ್ಲಿಸಿದವರಿಗೆ ತುರ್ತಾಗಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು. ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಸಂಘದ ಟಿ.ಎಂ.ವೆಂಕಟೇಶ್, ಡಿವೈಎಫ್‌ಐ ವಿಜಯಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.