ADVERTISEMENT

ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಶುರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 8:15 IST
Last Updated 11 ಆಗಸ್ಟ್ 2011, 8:15 IST
ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಶುರು
ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಶುರು   

ಕೋಲಾರ: ಶ್ರಾವಣ ಮಾಸದ ಹಬ್ಬಗಳಲ್ಲಿ ಎರಡನೆಯದಾದ ಗೌರಿ-ಗಣೇಶ ಹಬ್ಬಕ್ಕೆ ಇನ್ನೂ 20 ದಿನ ಬಾಕಿ ಇರುವಂತೆಯೇ ಚಂದಾ ವಸೂಲಿಯೂ ಶುರುವಾಗಿದೆ. ವಿವಿಧ ಸಂಘಗಳು, ಬಾಲಕರ ತಂಡಗಳ ಸದಸ್ಯರು ಸದ್ದಿಲ್ಲದೆ ಚಂದಾ ವಸೂಲಿಗೆ ಇಳಿದಿದ್ದಾರೆ.

ಕಾಲೇಜಿಗೆ ದಂಡು: ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅಂಗಡಿಗಳಿಂದ, ದಾರಿಹೋಕ ರಿಂದ ಚಂದಾ ವಸೂಲಿ ಮಾಡುವುದು ಮಾಮೂಲಿ. ಆದರೆ ಈ ಬಾರಿ, ಆರಂಭದಲ್ಲೆ ಹಲವು ಯುವಕರ ತಂಡಗಳು ಶಾಲಾ- ಕಾಲೇಜುಗಳಿಗೂ ಕಾಲಿಟ್ಟಿವೆ.

ನಗರದ ಬಾಲಕರ ಸರ್ಕಾರಿ ಕಾಲೇಜಿಗೆ ಕೆಲವು ದಿನಗಳಿಂದ ಹಲವರು ಯುವಕರು ಬಂದು ಚಂದಾ ವಸೂಲಿ ಮಾಡಿದ್ದಾರೆ. ಕೊಟ್ಟಷ್ಟು ಚಂದಾವನ್ನು ಪಡೆಯದ ಯುವಕರು ನಿರ್ದಿಷ್ಟ ಮೊತ್ತಕ್ಕಾಗಿ ಆಗ್ರಹಿಸಿದ ಘಟನೆಗಳೂ ಅಲ್ಲಿ ನಡೆದಿವೆ.

ಮುಂಗಡ ಹಣ: ಚಂದಾ ವಸೂಲಿ ಮಾಡಿ ಹಣವನ್ನು ಸಂಗ್ರಹಿಸಿ ಅಂಗಡಿಗೆ ತೆರಳಿ ಒಮ್ಮೆಗೇ ಗಣೇಶ ಮೂರ್ತಿಯನ್ನು ತರುವ ಪರಿಪಾಠದ ಜೊತೆಗೆ ಮತ್ತೊಂದು ಗಮನಾರ್ಹ ಪರಿಪಾಠವೂ ಇದೆ. ಚಿಕ್ಕ ಬಾಲಕರು ಚಂದಾ ಹಣವನ್ನು ಸಂಗ್ರಹಿಸಿ ತಮ್ಮಲ್ಲಿಯೇ ಇಟ್ಟುಕೊಳ್ಳದೇ ಅಂಗಡಿಗಳ ಮಾಲಿಕರಿಗೆ ಮುಂಗಡವಾಗಿಯೇ ನೀಡುತ್ತಾರೆ. ನಿತ್ಯವೂ ಸಂಜೆ ಚಂದಾ ಹಣ ಮಾಲಿಕರನ್ನು ತಲುಪುತ್ತದೆ.  ಬಾಲಕರು ತಾವು ಸಂಗ್ರಹಿಸಿದ ಒಟ್ಟು ಚಂದಾಕ್ಕೆ ತಕ್ಕುದಾದ ಮೂರ್ತಿಯನ್ನು ಹಬ್ಬಕ್ಕೆ ಕೆಲವು ದಿನ ಮುಂಚೆ ಕೊಂಡೊಯ್ಯುತ್ತಾರೆ.

ಚಂದಾ ವಸೂಲಿ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿವೆ. ದಾರಿಹೋಕರವನ್ನು ಬಲವಂತವಾಗಿ ತಡೆದು ಚಂದಾ ವಸೂಲಿ ಮಾಡುವ, ಅಂಗಡಿಗಳಿಗೆ ನುಗ್ಗಿ ಚಂದಾಕ್ಕಾಗಿ ಆಗ್ರಹಿಸುವ ಸನ್ನಿವೇಶಗಳನ್ನು ಜಿಲ್ಲಾಡಳಿತ ನಿಯಂತ್ರಿಸಬೇಕು ಎನ್ನುತ್ತಾರೆ ಬಾಲಕರ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರು.

ಭಕ್ತಿಯುಳ್ಳವರು ತಮ್ಮ ಮಿತಿಯಲ್ಲಿ ಪೂಜೆ ಮಾಡಬೇಕೆ ಹೊರತು ಅನ್ಯರಿಂದ ಬಲವಂತವಾಗಿ ಚಂದಾ ವಸೂಲಿ ಮಾಡಬಾರದು. ಪೊಲೀಸರು, ಅಧಿಕಾರಿಗಳು ಅಂಥ ಪ್ರಯತ್ನಗಳನ್ನು ಆರಂಭದಲ್ಲೆ ತಡೆಯಬೇಕು.  ಪ್ರತಿ ವರ್ಷವೂ ಹಿಂದಿನ ವರ್ಷಕ್ಕಿಂತ ದೊಡ್ಡದಾದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಚಂದಾ ವಸೂಲಿ ಸಂದರ್ಭದಲ್ಲಿ ಹೆಚ್ಚಿನ ಹಣ ನೀಡಬೇಕೆಂಬ ಒತ್ತಾಯಕ್ಕೂ ಅದೇ ಕಾರಣ ಎನ್ನುತ್ತಾರೆ ಅವರು.

ಚಂದಾ ವಸೂಲಿ ಮಾಡಬಾರದು ಎಂದು ಪ್ರಕಟಣೆ ನೀಡುವ ಪೊಲೀಸರು ಮತ್ತು ಆಡಳಿತ, ಚಂದಾ ವಸೂಲಿ ಮಾಡುವವರನ್ನು ತಡೆಯುವ ಪ್ರಯತ್ನವನ್ನು ಮಾಡುವುದಿಲ್ಲ. ವಸೂಲಿಗಾರರಿಗೆ ಇದು ಹೆಚ್ಚು ಧೈರ್ಯವನ್ನು ಕೊಡುತ್ತಿದೆ ಎಂಬುದನ್ನು ಮರೆಯುವಂತಿಲ್ಲ ಎಂಬುದು ಅವರ ಅಭಿಪ್ರಾಯ.

ಒಂದೇ ಅಂಗಡಿ: ನಗರದಲ್ಲಿ ಸದ್ಯಕ್ಕೆ ಗಣೇಶ ಮೂರ್ತಿಗಳನ್ನು ಮಾರುವ ಒಂದು ಅಂಗಡಿ ಮಾತ್ರ ಬಾಗಿಲು ತೆರೆದಿದೆ. ಹಳೇ ಬಸ್ ನಿಲ್ದಾಣದ ರಸ್ತೆಯಲ್ಲಿ ಕೀಲಾರಿಪೇಟೆಯ ಮಂಜುನಾಥ ಎಂಬುವವರು 80 ಸಾವಿರ ರೂಪಾಯಿ ಬಂಡವಾಳ ಹೂಡಿ ಕಠಾರಿಪಾಳ್ಯದ ಕಾರ್ಖಾನೆಯಿಂದ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮತ್ತು ಪ್ರದರ್ಶನಕ್ಕಿಟ್ಟಿದ್ದಾರೆ.

ದಾರಿಹೋಕರು, ಪ್ರಯಾಣಿಕರಿಗೆ ಈ ಅಂಗಡಿ ಕುತೂಹಲ ಮತ್ತು ಪ್ರೇರಣೆ ಮೂಡಿಸಿದೆ. ಅಲ್ಲಿ ಜಿಂಕೆ, ನವಿಲು, ಹಸು, ಆನೆಯ ಜೊತೆಗೆ ಕುಳಿತ ಗಣೇಶ ಮೂರ್ತಿ, ಸಾಯಿಬಾಬಾ ರೂಪದ ಗಣೇಶ, ಶಿವನ ತೊಡೆಯ ಮೇಲೆ ಕುಳಿತ ಗಣೇಶ ಮೂರ್ತಿಗಳು ವಿಶೇಷವಾಗಿವೆ. ಗೌರಿ ಮೂರ್ತಿಗಳು ಹೆಚ್ಚಿಗಿಲ್ಲ. ಆದರೂ, ಹಲವರು ಈ ಅಂಗಡಿಗೆ ಭೇಟಿ ನೀಡುತ್ತಿದ್ದಾರೆ.

ಸದ್ಯಕ್ಕೆ ಅಂಗಡಿಯಲ್ಲಿ ರೂ 400ರಿಂದ 4 ಸಾವಿರ ರೂಪಾಯಿವರೆಗಿನ ಬೆಲೆಯ ಗಣೇಶ ಮೂರ್ತಿಗಳಿವೆ. 25 ರೂಪಾಯಿ ಗಣೇಶ ಮೂರ್ತಿಗಳು ಇನ್ನೂ ಬರಬೇಕಾಗಿವೆ. ಕಳೆದ ವರ್ಷ 10 ರೂಪಾಯಿ ನೀಡಿದರೆ ಪುಟ್ಟ ಗಣೇಶ ಮೂರ್ತಿ ದೊರಕುತ್ತಿತ್ತು. ಈ ಬಾರಿ ಅಂಥ ಮೂರ್ತಿಗಳಿಲ್ಲ. ಎಲ್ಲ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಮೂರ್ತಿಗಳ ಬೆಲೆಯೂ ಹೆಚ್ಚಾಗಿದೆ ಎನ್ನುತ್ತಾರೆ ಮಂಜುನಾಥ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.