ADVERTISEMENT

ಚರಂಡಿ ಕಾಲುವೆ ಧ್ವಂಸ: ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:50 IST
Last Updated 7 ಸೆಪ್ಟೆಂಬರ್ 2013, 6:50 IST

ಮುಳಬಾಗಲು: ಪಟ್ಟಣದ ಸೋಮೇಶ್ವರಪಾಳ್ಯ ಮತ್ತು ಹೊಸಪಾಳ್ಯಕ್ಕೆ ಹೊಂದಿಕೊಂಡಿರುವ ಬಳೇ ಚಂಗಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಪುರಸಭೆಯು ಚರಂಡಿ ಕಾಲುವೆ ಕಾಮಗಾರಿಯನ್ನು ಸಕಾಲಕ್ಕೆ ಸಮರ್ಪಕವಾಗಿ ಮುಗಿದ ಕಾರಣ ಜನ ಸಂಚಾರಕ್ಕೆ ಮತ್ತು ಮಕ್ಕಳಿಗೆ ತೊಂದರೆಯಾಗಿದೆ.

ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂಬ ಕಾರಣಕ್ಕೆ ಪುರಸಭೆಯು ಜೆಸಿಬಿಗಳಿಂದ ಚರಂಡಿಯ ಮೇಲ್ಭಾಗದ ಕಲ್ಲು ಚಪ್ಪಡಿಗಳನ್ನು ತೆರವುಗೊಳಿಸಿತು. ಶಾಲೆ ಮುಂಭಾಗದಿಂದ ಕೊಂಚ ದೂರದವರೆಗೂ ಹಳ್ಳ ತೆಗೆದಿರುವ ಕಾರಣ ಶಾಲೆಯ ಸಿಬ್ಬಂದಿ, ಮಕ್ಕಳು, ಅಂಗಡಿಗಳ ಮಾಲೀಕರು, ಗ್ರಾಹಕರಿಗೆ ತೊಂದರೆಯಾಗಿದೆ. ಹಳ್ಳ ದಾಟಲಾಗದೆ ಜನ ಪರದಾಡುವಂತಹ ಸ್ಥಿತಿ ಉಂಟಾಗಿದೆ.

ಪುರಸಭೆಯು ಏಕಾಏಕಿ ಚಪ್ಪಡಿಗಳನ್ನು ತೆಗೆಸಿ ನಂತರ ಸರಿಪಡಿಸದಿರುವುದರಿಂದ ಶಾಲೆಯ ಚಟುವಟಿಕೆಗಳಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗಿದೆ ಎಂದು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಜಯರಾಮ್ ಪುರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜೆಸಿಬಿಯಿಂದ ಅಗೆದಿರುವ ಕಾರಣ ಸುತ್ತಮುತ್ತಲ ಮನೆಗಳ ದೂರವಾಣಿ ಸಂಪರ್ಕ, ಕುಡಿಯುವ ನೀರಿನ ಪೈಪ್‌ಲೈನ್ ಸಹ ಹಾಳಾಗಿದೆ. ಒಳಚರಂಡಿ ನೀರು ಸೋರಿಕೆಯಾಗಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಬಡಾವಣೆಗಳಲ್ಲಿ ದುರ್ವಾಸನೆ ಕಾಣಿಸಿಕೊಂಡಿದೆ. ಅಸಹ್ಯಕರ ಕೊಚ್ಚೆಯಲ್ಲಿಯೇ ನಡೆದಾಡಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸೋಮೇಶ್ವರ ದೇವಾಲಯ ಸಮಿತಿ ಸಂಚಾಲಕ ನಾರಾಯಣಪ್ಪ.

ಕಲ್ಲು ಚಪ್ಪಡಿಗಳನ್ನು ತೆರವುಗೊಳಿಸಿ ಒಂದು ವಾರವಾಯಿತು. ಕಲ್ಲುಚಪ್ಪಡಿಗಳನ್ನು ಮುಚ್ಚಿ ಚರಂಡಿ ವ್ಯವಸ್ಥೆ ಸರಿಪಡಿಸಬೇಕು ಎಂದು ಹಲವು ಬಾರಿ ಪುರಸಭೆಗೆ ಮನವಿ ಪತ್ರ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.