ADVERTISEMENT

ಚುನಾವಣಾ ಕರ್ತವ್ಯ: ಲೋಪವೆಸಗಿದರೆ ಕ್ರಮ

ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 12:27 IST
Last Updated 30 ಮಾರ್ಚ್ 2018, 12:27 IST
ಚುನಾವಣಾ ಶಾಖೆಯಿಂದ ಕೋಲಾರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ, ಪೊಲೀಸರಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿದರು
ಚುನಾವಣಾ ಶಾಖೆಯಿಂದ ಕೋಲಾರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ, ಪೊಲೀಸರಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿದರು   

ಕೋಲಾರ: ಚುನಾವಣೆ ಕರ್ತವ್ಯಕ್ಕೆ ನಿಯೋಜಿತವಾಗಿರುವ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು, ಲೋಪವೆಸಗಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಎಚ್ಚರಿಸಿದರು.

ಚುನಾವಣಾ ಶಾಖೆಯಿಂದ ನಗರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳಿಗೆ, ಪೊಲೀಸರಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಅಥವಾ ನಾಟ್ ರೀಚಬಲ್ ಮಾಡಿಕೊಂಡರೆ ಅಗುವ ಅನಾಹುತಗಳಿಗೆ ನೀವೆ ಹೊಣೆಗಾರರು’ ಎಂದು ಅವರು ಎಚ್ಚರಿಸಿದರು.ಚುನಾವಣೆ ದಿನಾಂಕ ಘೋಷಣೆಯಾಗಿದೆ. ಕರ್ತವ್ಯದಲ್ಲಿ ಲೋಪವೆಸಗಿದರೆ ಸೇವೆಗೆ ಹಿನ್ನಡೆಯಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ಪ್ರಕರಣ ಇತ್ಯರ್ಥಗೊಳಿಸುವವರೆಗೆ ಯಾವುದೇ ಬಡ್ತಿ ಸಿಗದು. ಆಯೋಗದ ಅಡಿಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕಂಟ್ರೋಲ್ ರೂಂಗೆ ಮಾಹಿತಿ ನೀಡಿ: ‘ಅಧಿಕಾರಿಗಳು, ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಮೊಬೈಲನ್ನು ಸ್ವೀಚ್ ಅಪ್ ಮಾಡಬಾರದು. ಸಿಗ್ನಲ್ ಇಲ್ಲ ಬ್ಯಾಟರಿ ಚಾರ್ಜ್ ಮುಗಿದಿದೆ ಎಂಬ ಸಬೂಬು ಹೇಳಬಾರದು. ಎಲ್ಲದಕ್ಕೂ ವ್ಯವಸ್ಥೆ ಇದೆ. ಮೊಬೈಲ್ ಸಮಸ್ಯೆಯಾದರೆ ತಂಡದಲ್ಲಿನ ಬೇರೆಯವರ ಮೋಬೈಲ್‌ಗೆ ಸಂಪರ್ಕಿಸಬಹುದು ಎಂಬುದನ್ನು ಕಂಟ್ರೋಲ್ ರೂಂಗೆ ಮಾಹಿತಿ ನೀಡಿ’ ಎಂದು ಹೇಳಿದರು.

ADVERTISEMENT

ವೀಡಿಯೋ ಚಿತ್ರೀಕರಣ ಕಡ್ಡಾಯ: ಜಿಲ್ಲೆಯಲ್ಲಿನ ತನಿಖಾ ಠಾಣೆಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ಕಟ್ಟುನಿಟ್ಟಾಗಿ ನಡೆಸಬೇಕು. ಎಲ್ಲ ಪ್ರಕ್ರಿಯೆಗಳ ವೀಡಿಯೋ ಚಿತ್ರೀಕರಣ ಕಡ್ಡಾಯವಾಗಿ ದಾಖಲಿಸಬೇಕು. ₹ 10 ಲಕ್ಷ ಮೇಲ್ಪಟ್ಟು ನಗದು ಸಾಗಾಟ ಕಂಡುಬಂದಲ್ಲಿ ತಕ್ಷಣ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಾಹನಗಳಲ್ಲಿ ನಗದಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಇಲ್ಲದಿದ್ದಲ್ಲಿ ಜಫ್ತಿ ಮಾಡಿ ಎಂದು ಸಲಹೆ ನೀಡಿದರು.

ಏ.4ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಕಾರ್ಯಕ್ರಮವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು. ವೀಡಿಯೋ ಸರ್ವಲೆನ್ಸ್ ತಂಡದವರು ಇಡೀ ಕಾರ್ಯಕ್ರಮವನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿರುವ ವೀಡಿಯೋ ವ್ಯೂವಿಂಗ್ ಟೀಂ ಎಲ್ಲ ವೀಡಿಯೋಗಳನ್ನು ವೀಕ್ಷಿಸಿ ಚುನಾವಣಾ ಅಕ್ರಮ ಕಂಡುಬಂದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ವಿವಿಧ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಜಾಹೀರಾತು, ಸಾಮಾಜಿಕ ಜಾಲತಾಣ ಮೇಲೂ ಎಂಸಿಎಂಸಿ ಟೀಂ ನಿಗಾ ವಹಿಸಬೇಕು. ಅಭ್ಯರ್ಥಿಗಳು ಚುನಾವಣಾ ಪ್ರಚಾರ ಅಥವಾ ಸಭೆ ನಡೆಸಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದರ ಕಡೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.

ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ದೂರು ಸಲ್ಲಿಸಲು 08152-229100 ಅಥವಾ 18004259900 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಈ ಸಂಖ್ಯೆಯನ್ನು ಅಂಟಿಸಬೇಕು ಎಂದರು.ಸಿಬ್ಬಂದಿಗಳ ಕೊರತೆಯ ಕಾರಣ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವುದು ಅನಿವಾರ್ಯ. ಚುನಾವಣೆ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡುವ ಕೆಟ್ಟ ಚಾಳಿಯನ್ನು ಬಿಡಬೇಕು ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‌ ಕುಮಾರ್ ಸೂಚಿಸಿದರು.

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸೆಪಟ್, ಉಪವಿಭಾಗಾಧಿಕಾರಿ ಶುಭಕಲ್ಯಾಣ್ ಹಾಜರಿದ್ದರು.

**

ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಎಸಗಿದರೆ ಸೇವೆಗೆ ಹಿನ್ನಡೆಯಾಗುತ್ತದೆ. ಕೇಂದ್ರ ಚುನಾ ವಣಾ ಆಯೋಗ ಪ್ರಕರಣ ಇತ್ಯರ್ಥ ಗೊಳಿಸುವವರೆಗೆ ಬಡ್ತಿ ಸಿಗದು –  ಜಿ.ಸತ್ಯವತಿ, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.