ಶ್ರೀನಿವಾಸಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆ ಪಕ್ಷದ ಮುಖಂಡರು ಜನರ ಸಮಸ್ಯೆಗಳಿಗೆ ಸ್ಪಂದಿ ಸುವ ಬದಲು ಅಧಿಕಾರಕ್ಕಾಗಿ ಕಿತ್ತಾಡು ತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ವಿ.ಹನುಮಂತರಾವ್ ಆಪಾದಿಸಿದರು.
ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸ ಲಾಗಿದ್ದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆ ಮುಂದಿಟ್ಟು ಕೊಂಡು ಗ್ರಾಮಗಳಿಗೆ ತೆರಳಬೇಕು.
ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕು. ಕಾಂಗ್ರೆಸ್ ಪಕ್ಷಕಕ್ಕೆ ಮಾತ್ರ ಉತ್ತಮ ಆಡಳಿತ ನೀಡುವ ಶಕ್ತಿ ಇದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗಿ ಬಂದರೂ ಅಧಿಕಾರದ ವ್ಯಾಮೋಹ ಹೋಗಿಲ್ಲ. ಗಾಲಿ ಜನಾರ್ಧನರೆಡ್ಡಿ ಜೈಲಿ ನಲ್ಲಿದ್ದರೂ ಹೆಲಿಕಾಪ್ಟರ್ ಗುಂಗನ್ನು ಬಿಟ್ಟಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಅಧಿಕಾರದ ಆಸೆ ದೂರವಾಗಿಲ್ಲ ಎಂದು ಎಂದರು.
ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಮಾತನಾಡಿ, ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿ ಯುವ ಯೋಜನೆಯನ್ನು ಅನುಷ್ಠಾನಕ್ಕೆ ತರದಿದ್ದರೆ ಇಲ್ಲಿನ ಜನತೆ ಬೇರೆ ಕಡೆಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂಥ ಪರಿಸ್ಥಿತಿ ಯನ್ನು ತಪ್ಪಿಸಲು ಶಾಶ್ವತ ನೀರಾವರಿ ಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷೆ ರಾಣಿ ಸತೀಶ್, ವಿಧಾನ ಪರಿಷತ್ ಸದಸ್ಯ ವಿ.ಆರ್. ಸುದರ್ಶನ್, ಡಿಸಿಸಿ ಅಧ್ಯಕ್ಷ ಅನಿಲ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಮುಖಂಡರಾದ ದಿಂಬಾಲ ಅಶೋಕ್, ನಜೀರ್ ಅಹ್ಮದ್, ವಿ.ವೆಂಕಟಮುನಿಯಪ್ಪ, ಅಣ್ಣಿಹಳ್ಳಿ ಕೃಷ್ಣಪ್ಪ ಮಾತನಾಡಿದರು.
ಜಿ.ಪಂ. ಉಪಾಧ್ಯಕ್ಷ ಹರೀಶ್, ಮುಖಂಡರಾದ ಕೃಷ್ಣಸಿಂಗ್, ಎನ್.ಶ್ರೀರಾಮರೆಡ್ಡಿ, ಬಿ. ವೆಂಕಟರೆಡ್ಡಿ, ಸಿ.ಮುನಿವೆಂಕಟಪ್ಪ, ಕೆ. ಎಸ್.ರೆಡ್ಡಪ್ಪ, ಅಕ್ಬರ್‌ಷರೀಫ್, ಟಿ.ವಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.