ADVERTISEMENT

ಜನಪ್ರತಿನಿಧಿಗಳ ರಾಜೀನಾಮೆ: ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 7:45 IST
Last Updated 24 ಜನವರಿ 2012, 7:45 IST
ಜನಪ್ರತಿನಿಧಿಗಳ ರಾಜೀನಾಮೆ: ಆಗ್ರಹ
ಜನಪ್ರತಿನಿಧಿಗಳ ರಾಜೀನಾಮೆ: ಆಗ್ರಹ   

ಮಾಲೂರು: ಡಿ.ವಿ.ಸದಾನಂದಗೌಡರು ಕರಾವಳಿ ಪ್ರಾಂತ್ಯದ ಮುಖ್ಯಮಂತ್ರಿಯಲ್ಲ. ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಅರಿಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದರು.

ಪಟ್ಟಣದಲ್ಲಿ ಸೋಮವಾರ ಕ.ರ.ವೇ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಹಾಗೂ ಡಾ.ಪರಶಿವಯ್ಯ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ರ‌್ಯಾಲಿಯಲ್ಲಿ ಅವರು ಮಾತನಾಡಿದರು.

ಕರಾವಳಿ ಭಾಗದ ಜನಪ್ರತಿನಿಧಿಗಳು ವಿನಾಃ ಕಾರಣ `ನೇತ್ರಾವತಿ ತಿರುವು~ ಎಂಬ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಶ್ಚಿಮ ಘಟ್ಟಗಳಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುತ್ತಿರುವ ನೀರನ್ನು ಬಯಲು ಸೀಮೆಗೆ ಹರಿಸಲು ಯೋಜನೆ ರೂಪಿಸಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿ ಕುರಿತಂತೆ ದ್ವಂದ್ವ ಹೇಳಿಕೆ ನಿಲ್ಲಿಸಬೇಕು ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಪ್ರತಿನಿಧಿಸುತ್ತಿರುವ ಸಂಸದರು, ಶಾಸಕರು ಎರಡೂ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಏರಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಶಾಶ್ವತ ನೀರಾವರಿ ಯೋಜನೆಗೆ ಹದಿಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಎರಡೂ ಜಿಲ್ಲೆಗಳ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಜನರಿಂದ ಅಧಿಕಾರಕ್ಕೆ ಬಂದಿರುವ ರಾಜಕಾರಣಿಗಳು ಜನರಿಗೋಸ್ಕರ ತಮ್ಮ ಅಧಿಕಾರ ತ್ಯಾಗ ಮಾಡಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣದ ಬಾಲಾಜಿ ವೃತ್ತದಿಂದ ಬೃಹತ್ ಮೆರವಣಿಗೆಯಲ್ಲಿ ಹೊರಟ ರ‌್ಯಾಲಿ ತಹಶೀಲ್ದಾರ್ ಕಚೇರಿ ತಲುಪಿತು. ತಹಶೀಲ್ದಾರ್ ಎಚ್.ಅಮರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘ ಸಂಸ್ಥೆ, ವಿದ್ಯಾರ್ಥಿಗಳು, ಯುವ ಸಮೂಹ ಹೋರಾಟದಲ್ಲಿ ಪಾಲ್ಗೊಂಡಿತ್ತು.

ಕರವೇ ರಾಜ್ಯ ಕಾರ್ಯದರ್ಶಿ ಎಸ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮಂತಪ್ಪ, ಜಿ.ಇ.ರಾಮೇಗೌಡ, ಪುರಸಭಾ ಸದಸ್ಯರಾದ ಟಿ.ರಾಮಚಂದ್ರ, ರಾಮಮೂರ್ತಿ, ಕರವೇ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಜಿಲ್ಲಾ ಘಟಕದ ಅಧ್ಯಕ್ಷ ರಾಜಗೋಪಾಲಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರ್‌ಗೌಡ, ಮುಖಂಡರಾದ ಆರ್.ಪ್ರಭಾಕರ್, ಕೆ.ವೈ.ನಂಜೇಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಉರುಗಿಲಿ ರುದ್ರಸ್ವಾಮಿ, ಕರವೇ ಕಾರ್ಯಾಧ್ಯಕ್ಷ ಬಡಗಿ ಶ್ರೀನಿವಾಸ್, ಉಪಾಧ್ಯಕ್ಷ ಜಿ.ಮಂಜುನಾಥ್‌ಗೌಡ, ಪ್ರಧಾನ ಸಂಚಾಲಕ ಎ.ಅಶ್ವಥರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜು, ಸಂಘಟನಾ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ನಗರ ಘಟಕದ ಅಧ್ಯಕ್ಷ ಪ್ರಸನ್ನ ಕುಮಾರ್, ವಿದ್ಯಾರ್ಥಿ ಮುಖಂಡ ನವೀನ್, ಮಹಿಳಾ ಘಟಕದ ಅನಂತಲಕ್ಷ್ಮೀ, ಎನ್.ವಿ.ಮುರಳೀಧರ್, ಶಿವಾರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.