ADVERTISEMENT

ಜಾತ್ರೆ ವಾದ್ಯಗೋಷ್ಠಿಗೆ ಚುನಾವಣೆ ನಿಯಮ ಅಡ್ಡಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 5:34 IST
Last Updated 15 ಮಾರ್ಚ್ 2014, 5:34 IST

ಕೆಜಿಎಫ್: ನಗರದಲ್ಲಿ ನಡೆಯುತ್ತಿರುವ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇಗು­ಲದ 79ನೇ ವರ್ಷದ ಜಾತ್ರೆ­ಯಲ್ಲಿ ರಾತ್ರಿ ಹತ್ತು ಗಂಟೆ ನಂತರ ಯಾವುದೇ ವಾದ್ಯಗೋಷ್ಠಿಗೆ ಅವಕಾಶ ನೀಡುವುದಿಲ್ಲ ಎಂದು ಸಹಾಯಕ ಚುನಾ­ವಣಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ರಾತ್ರಿ ವೇಳೆ ವಾದ್ಯಗೋಷ್ಠಿ ಇಲ್ಲದಿದ್ದರೆ ಜಾತ್ರೆ ಯಶಸ್ವಿಯಾಗುವುದಿಲ್ಲ. ಪ್ರಖ್ಯಾತ ವಾದ್ಯಗೋಷ್ಠಿ (ಆರ್ಕೆಸ್ಟ್ರಾ)ಗಳಿಗಾಗಿ ಈಗಾ­ಗಲೇ ಲಕ್ಷಾಂತರ ರೂಪಾಯಿ ಮುಂಗಡ ನೀಡಲಾಗಿದೆ. ಧಾರ್ಮಿಕ ಕಾರ್ಯಕ್ರಮವಾದ್ದರಿಂದ ರಾತ್ರಿ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು ಎಂದು ವಿವಿಧ ಜನಾಂಗದ ಮುಖಂಡರು ಸಹಾಯಕ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮಕ್ಕೆ ರಾತ್ರಿ ಹತ್ತು ಗಂಟೆ ನಂತರ ಅವಕಾಶ ನಿರಾಕರಿಸಲಾಗುತ್ತದೆ. ಧಾರ್ಮಿಕ ಉತ್ಸವ, ಮೆರವಣಿಗೆ ಮುಂತಾದವು­ಗಳಿದ್ದರೆ ಅವುಗಳಿಗೆ ಅನುಮತಿ ನೀಡ­ಲಾಗುತ್ತದೆ. ವೇದಿಕೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಕಾಣಿಸಿಕೊಂಡರೆ ಅಥವಾ ಭಾಗವಹಿಸಿದರೆ ಅನಾವಶ್ಯಕ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿ­ಸಿದ ಫ್ಲೆಕ್ಸ್‌ಗಳನ್ನು ಸಹ ಹಾಕಲು ಅನುಮತಿ ನೀಡಲಾಗುತ್ತದೆ. ಚುನಾವಣೆ ವೇಳೆಯಾದ್ದರಿಂದ ಎಲ್ಲ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿ­ಸ­ಲಾಗುತ್ತದೆ. ನೀತಿ ಸಂಹಿತೆಯನ್ನು ಯಾರೂ ಉಲ್ಲಂಘಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಹದಿಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಪ್ರತಿಯೊಂದು ದಿನ ಒಂದೊಂದು ಜನಾಂಗದವರು ದೇವರ ಉತ್ಸವವನ್ನು ನಡೆಸಿ­ಕೊಡು­ತ್ತಿದ್ದರು. ರಾತ್ರಿ ವೇಳೆ ಮಧ್ಯರಾತ್ರಿ ಅಥವಾ ಮುಂಜಾನೆವರೆವಿಗೂ ನಗರದ ವಿವಿಧೆಡೆ ವಾದ್ಯಗೋಷ್ಠಿಗಳನ್ನು ಏರ್ಪಡಿ­ಸುತ್ತಿದ್ದರು. ಇವುಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವ­ಜನಿಕರು ಸೇರುತ್ತಿದ್ದರು. ಸಹಾಯಕ ಚುನಾವಣಾಧಿಕಾರಿಗಳ ಆದೇಶ­ದಿಂದಾಗಿ ಜನಾಂಗದ ಮುಖಂಡರು ನಿರಾಸೆಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.