ADVERTISEMENT

ಜಿ.ಎಸ್‌.ಪರಮಶಿವಯ್ಯ ಅಮರರಾಗಲಿ...

ಅಗಲಿದ ನೀರಾವರಿ ತಜ್ಞ: ಎಲ್ಲೆಡೆ ಶೋಕ, ಶ್ರದ್ಧಾಂಜಲಿ, ಹೋರಾಟ ತೀವ್ರಗೊಳಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 5:07 IST
Last Updated 12 ಮಾರ್ಚ್ 2014, 5:07 IST

ಕೋಲಾರ: ಜಿಲ್ಲೆಯ ಎಲ್ಲೆಡೆ ಮಂಗಳವಾರ ವಿಷಾದ, ಸಂತಾಪ ಹೆಪ್ಪುಗಟ್ಟಿತ್ತು. ಯಾರ ವರದಿ ಅನುಷ್ಠಾನಕ್ಕಾಗಿ ಒಂದೂವರೆ ದಶಕದಿಂದಲೂ ಹೋರಾಟಗಳು ನಡೆಯುತ್ತಿವೆಯೋ ಅಂಥ ನೀರಾವರಿ ಯೋಜನೆಗೆ ರೂಪ ರೇಖೆ ಸಿದ್ಧಪಡಿಸಿದ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ನಿಧನದ ಸುದ್ದಿ, ಸೂರ್ಯ ನೆತ್ತಿ ಮೇಲೆ ಬರುವುದಕ್ಕೂ ಮುಂಚೆ ಜಿಲ್ಲೆಯಾದ್ಯಂತ ಹರಡಿತ್ತು.

ಹೋರಾಟಗಾರರು, ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ನೌಕರರು ಸೇರಿದಂತೆ ಸಾವಿರಾರು ಮಂದಿಯನ್ನು ನಿಧನ ಸುದ್ದಿ ಮೂಕರನ್ನಾಗಿಸಿತ್ತು. ಅಂಥ ಮಹಾನ್‌ ಚೇತನ ಕಣ್ಮರೆಯಾಯಿತೇ ಎಂಬ ಪ್ರಶ್ನೆ ಥಟ್ಟನೆ ಮೂಡಿತ್ತು. ಇಲ್ಲ, ಅವರು ನಿಧನರಾಗಿಲ್ಲ ಎಂದೇ ಹಲವರು ತಮ್ಮ ನಡುವೆ ಚರ್ಚೆ ನಡೆಸಿದರು. ಭೌತಿಕವಾಗಿ ನಮ್ಮಿಂದ ದೂರವಾದರೂ ಅವರ ಚೇತನ ಬಯಲು ಸೀಮೆಯ ಎಲ್ಲ ಜಿಲ್ಲೆಗಳಲ್ಲಿ ಸದಾ ಅಮರವಾಗಿರಲಿ ಎಂದು ಆಶಿಸಿದರು. ಪರಮಶಿವಯ್ಯ ಅಮರರಾಗಲಿ ಎಂಬ ಘೋಷಣೆಗಳನ್ನೂ ಕೂಗಿದರು. ಪರಮಶಿವಯ್ಯನವರ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೀವ್ರಗೊಳಿಸುವ ನಿರ್ಧಾರನ್ನೂ ಪ್ರಕಟಿಸಿದರು. ನಗರದ ಗಾಂಧೀವನ ಈ ಅಪರೂಪದ ಶ್ರದ್ಧಾಂಜಲಿಗಳಿಗೆ ಸಾಕ್ಷಿಯಾಯಿತು.

ಹೋರಾಟ ಸಮಿತಿ: ನಗರದ ಗಾಂಧೀವನದ ಆವರಣದಲ್ಲಿ ಇಳಿಮಧ್ಯಾಹ್ನ ಶಾಶ್ವತ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಮುಖಂಡರಾದ ಜಿ.ಸಿ.ಬೈಯ್ಯಾರೆಡ್ಡಿ, ಪ್ರಭಾಕರ್ ಮತ್ತು ವಿ.ಗೀತಾ, ಬಯಲುಸೀಮೆ ಜಿಲ್ಲೆಗಳ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ಪರಮಶಿವಯ್ಯ ಜೀವನ ಪರ್ಯಂತ ಶ್ರಮಿಸಿದರು ಎಂದು ಸ್ಮರಿಸಿದರು.

ಒಂದೂವರೆ ದಶಕದಿಂದ ಅವರ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ನಿರಂತರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಹಿಸಿರುವ ನಿರ್ಲಕ್ಷ್ಯ ಖಂಡನೀಯ. ಪರಮಶಿವಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸುವುದೇ ಆದರೆ ಸರ್ಕಾರಗಳು ಅವರ ವರದಿಯನ್ನು ಜಾರಿಗೊಳಿಸುವ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿ. ಇಲ್ಲವಾದರೆ ಶ್ರದ್ಧಾಂಜಲಿ ಸಲ್ಲಿಸುವ ಅರ್ಹತೆ ಸರ್ಕಾರಗಳಿಗಿಲ್ಲ ಎಂದರು.

ಬಯಲುಸೀಮೆ ಜಿಲ್ಲೆಗಳಿಗೆ ನೀರು ತರದೇ ಸಾಯಲಾರೆ ಎಂದೇ ಹೇಳಿದ್ದ ಪರಮಶಿವಯ್ಯ ತಮ್ಮ ಆಸೆ ಈಡೇರುವ ಮೊದಲೇ ಕಣ್ಮುಚ್ಚಿದ್ದಾರೆ. ಬದುಕಿರುವಾಗಲೇ ತಮ್ಮ ವರದಿ ಅನುಷ್ಠಾನಕ್ಕೆ ಬರುವುದರ ಕುರಿತ ಅನಿಶ್ಚಿತತೆಯೂ ಅವರನ್ನು ಕಾಡಿತ್ತು. ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಅದಕ್ಕೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್, ನಾರಾಯಣರೆಡ್ಡಿ, ವಿಜಯಕೃಷ್ಣ, ರಮೇಶ್, ಗಂಗಮ್ಮ, ದೇವರಾಜ, ಪಂಡಿತ್ ಮುನಿವೆಂಕಟಪ್ಪ, ಎಂ.ವಿ.ನಾರಾಯಣಸ್ವಾಮಿ, ಯಲ್ಲಪ್ಪ, ವಿಜಯಕೃಷ್ಣ, ವಾಸುದೇವರೆಡ್ಡಿ, ಶ್ರೀರಾಂ, ಸುಶೀಲಾ ಪಾಲ್ಗೊಂಡಿದ್ದರು.

ಹಸಿರು ಸೇನೆ–ರೈತ ಸಂಘ: ಬಯಲು ಸೀಮೆ ಜಿಲ್ಲೆಗಳ ಜನರ ನೀರಿನ ದಾಹ ತೀರಿಸುವ ಕನಸು ಕಂಡಿದ್ದ, ಶಾಶ್ವತ ನೀರಾವರಿ ಹೋರಾಟದ ರೂವಾರಿ ಡಾ. ಪರಮಶಿವಯ್ಯ­ನವರ ನಿಧನ ಬಯಲುಸೀಮೆಯ ಎಲ್ಲ ಜಿಲ್ಲೆಗಳ ಜನರಿಗೆ ತುಂಬಲಾರದ ನಷ್ಟ, ಅಪಾರ ನೋವು ಉಂಟು ಮಾಡಿದೆ ಎಂದು ಹಸಿರು ಸೇನೆ–ರೈತ ಸಂಘದ ಪ್ರಮುಖರು ವಿಷಾದಿಸಿದರು.

ನಗರದ ಗಾಂಧೀವನದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಬಯಲು ಸೀಮೆ ಜಿಲ್ಲೆಗಳ ಜನ ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಇನ್ನಾದರೂ ಉಗ್ರ ಹೋರಾಟ ಹಮ್ಮಿಕೊಳ್ಳಬೇಕು. ಪರಮಶಿವಯ್ಯ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಕೆ. ಶ್ರೀನಿವಾಸಗೌಡ, ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ನಾಗರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಹೋರಾಟದ ಗೀತೆಗಳನ್ನು ಹಾಡಿದರು.

ಮುಖಂಡರಾದ ಕೆ.ನಾರಾಯಣಗೌಡ, ಮುನೇಗೌಡ, ಕಾಂಗ್ರೆಸ್ ಮುಖಂಡ ಹೊಳಲಿ ಪ್ರಕಾಶ್, ಶಿವಾರೆಡ್ಡಿ, ನಾಗರಾಜ ಗೌಡ, ಕೃಷ್ಣೇಗೌಡ, ಹನುಮಪ್ಪ, ಪುರುಷೋ­ತ್ತಮ್, ರಾಜೇಶ್, ಮಂಜುನಾಥ್, ಎಸ್.ಪಿ.ರಂಜಿತ್, ಸಂತೋಷ್, ವಿಶ್ವನಾಥ್, ಸುನಿಲ್, ವಿಷ್ಣು, ಗೌರೀಶ್, ಮಂಜು­ನಾಥ್, ರಾಮಚಂದ್ರ, ವೇಣುಗೋಪಾಲ್, ರೆಡ್ಡಿ ಪಾಲ್ಗೊಂಡಿದ್ದರು.

ಪರಮಶಿವಯ್ಯ ನಿಧನ: ಸಂತಾಪ
ಕೋಲಾರ
: ನೀರಾವರಿ ತಜ್ಞರ ಜಿ.ಎಸ್.ಪರಮಶಿವಯ್ಯ ಅವರ ನಿಧನಕ್ಕೆ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸಂತಾಪ ಸೂಚಿಸಿದ್ದಾರೆ.

ನೇತ್ರಾವತಿಯಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದು ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಹರಿಸುವ ವರದಿಯನ್ನು ತಯಾರಿಸಿದ್ದ ಪರಮಶಿವಯ್ಯ ಅವರ ನಿಧನ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ­ಗಳು ಬದ್ಧತೆ ಪ್ರದರ್ಶಿಸದ ಹಿನ್ನೆಲೆಯಲ್ಲಿ ಅತ್ಯಂತ ನೋವಿನಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಳಬಾಗಲು ವರದಿ:
ಪರಮಶಿವಯ್ಯ ಅವರ ನಿಧನಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಅಲುವೇಲಮ್ಮ, ಸಿಪಿಐ ಮುಖಂಡರಾದ ಶಂಕರ್, ಮುನಿರಾಜ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುರೇಶ್, ಟಿ.ಎಸ್.ರಮೇಶ್, ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಬಿ.ನಾರಾ­ಯಣ­ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೋರಾಟದ ಕೊಂಡಿ ಕಳಚಿದೆ
ಮಾಲೂರು:
ಜಿ.ಎಸ್.ಪರಮಶಿವಯ್ಯ ಅವರು  ಬಯಲು ಸೀಮೆಯ ಜಿಲ್ಲೆಗಳಲ್ಲಿ ನೀರಿನ ಕೊರತೆಯನ್ನು 25 ವರ್ಷ­ಗಳ ಹಿಂದೆಯೇ ಅರಿತು ಶಾಶ್ವತ ನೀರಾವರಿ ಯೋಜನೆ ರೂಪಿಸಲು ಮುಂದಾಗಿದ್ದರು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಎಂ.ವಿ.ಹನುಮಂತಯ್ಯ ತಿಳಿಸಿದರು.

ಪಟ್ಟಣದ ಕೃಷಿಕ ಸಮಾಜ ಸಭಾಂಗಣದಲ್ಲಿ ಮಂಗಳ­ವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಜಿ.ಎಸ್.ಪರಮಶಿವಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪರಮಶಿವಯ್ಯ ಅವರು 7 ವರದಿ ತಯಾರು ಮಾಡಿ­ದ್ದರು. ಅದರ ಮೊದಲನೇ ವರದಿಯೇ ಎತ್ತಿನ ಹೊಳೆ ಯೋಜನೆ­ಯಾಗಿದೆ. ಅವರ ನಿಧನದಿಂದ ಶಾಶ್ವತ ನೀರಾವರಿ ಯೋಜನೆ ಹೋರಾಟದ ಮೊದಲನೇ ಕೊಂಡಿ ಕಳಚಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ಎ.ಅಶ್ವಥರೆಡ್ಡಿ, ತಾಲ್ಲೂಕು ಅಧ್ಯಕ್ಷ ಬೆಡ್‌ಶೆಟ್ಟಹಳ್ಳಿ ರಮೇಶ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ತ್ಯಾವನಹಳ್ಳಿ ಡಾ.ಗೋಪಾಲಗೌಡ, ಪ್ಲಾಸ್ಟಿಕ್ ನಿರ್ಮೂ­ಲನಾ ಸಮಿತಿಯ ಮುನಿಸ್ವಾಮಿ, ಪ್ರಗತಿ ಪರ ರೈತ ಗುಡ್ನಹಳ್ಳಿ ವೆಂಕಟೇಶ್, ಗಾಂಧಿ ಸರ್ಕಲ್ ಮಂಜು ಭಾಗವಹಿಸಿದ್ದರು.

ರೈತ ಸಂಘ, ಹಸಿರು ಸೇನೆ ಶ್ರದ್ಧಾಂಜಲಿ
ಮುಳಬಾಗಲು
: ಪಟ್ಟಣದ ಡಿ.ವಿ. ಗುಂಡಪ್ಪ ವೃತ್ತದಲ್ಲಿ ಮಂಗಳವಾರ ಸೇರಿದ ರೈತ ಸಂಘ ಹಸಿರು ಸೇನೆ ಕಾರ್ಯ­ಕರ್ತರು ನೀರಾವರಿ ತಜ್ಞ ಪರಮಶಿವಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಎನ್.ಹರೀಶ್ ಕುಮಾರ್, ಫಾರೂಕ್ ಪಾಷಾ, ಸುರೇಶ್, ರಂಜಿತ್ ಕುಮಾರ್, ಸಾಗರ್, ರಘು, ಬಾಲು, ಅಜೆಯ್,ಗಣೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.