ADVERTISEMENT

ಜೆಡಿಎಸ್ ಪ್ರಾಬಲ್ಯ; ಕಾಂಗ್ರೆಸ್ ಕುಸಿತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 6:20 IST
Last Updated 6 ಜನವರಿ 2011, 6:20 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. 5 ಜಿ.ಪಂ. ಕ್ಷೇತ್ರ ತನ್ನದಾಗಿಸಿಕೊಂಡಿರುವ ಜೆಡಿಎಸ್, ತಾಲ್ಲೂಕು ಪಂಚಾಯಿತಿಯ 17 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಆಡಳಿತ ಹಿಡಿದಿದೆ. ಕಳೆದ ಬಾರಿ ರಾಯಲ್ಪಾಡ್ ಮತ್ತು ರೋಣೂರು ಜಿಪಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ತಾಪಂನಲ್ಲಿ ಸಮ ಬಲವನ್ನು ಹೊಂದಿತ್ತು. ತನ್ನ ಒಬ್ಬ ಸದಸ್ಯರ ಬೆಂಬಲದಿಂದ ಜೆಡಿಎಸ್ ಅಧಿಕಾರದಲ್ಲಿ ಉಳಿದಿತ್ತು. ಆದರೆ ಈಗ ಜೆಡಿಎಸ್‌ಗೆ ಪೂರ್ಣ ಪ್ರಮಾಣದ ಬೆಂಬಲ ಸಿಕ್ಕಿದೆ.


ಶ್ರೀನಿವಾಸಪುರದಲ್ಲಿ ಪಕ್ಷಗಳು ಗೌಣ. ಚುನಾವಣೆ ಎಂದರೆ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಹಾಗೂ ಹಾಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ನಡುವಿನ ಹೋರಾಟ ಎಂದೇ ಭಾವಿಸಲಾಗುತ್ತದೆ. ಇಲ್ಲಿನ ಮತದಾರರೂ ಅಷ್ಟೆ ಈ ಇಬ್ಬರು ಮುಖಂಡರ ಬೆನ್ನ ಹಿಂದೆ ಇರುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಸಮಬಲದ ಹೋರಾಟ ಇಲ್ಲಿನ ವಿಶೇಷ. ಆದರೆ ಈ ಚುನಾವಣೆಯಲ್ಲಿ ಸಮತೋಲನ ತಪ್ಪಿದೆ.

ಕಳೆದ ವಿಧಾನ ಸಭಾ ಚುನಾವಣೆಯಿಂದ ಈಚೆಗೆ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಈ ಕ್ಷೇತ್ರಕ್ಕೆ ಹೊಸದಾಗಿ ಸೇರ್ಪಡೆಯಾದ ಹೋಳೂರು ಮತ್ತು ಸುಗಟೂರು ಹೋಬಳಿಗಳಲ್ಲೂ ಇಂತಹುದೇ ಪರಿಸ್ಥಿತಿ ಏರ್ಪಟ್ಟಿದೆ. ಕಾಂಗ್ರೆಸ್ ಪ್ರಾಬಲ್ಯ ಕುಸಿಯಲು ಕಾರಣವಾದ ಅಂಶಗಳ ಬಗ್ಗೆ ಮುಖಂಡರು ಚಿಂತಿಸುತ್ತಿದ್ದಾರೆ.

ಜಿ.ಪಂ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ತಟ್ಟಿತ್ತು. ಯಲ್ದೂರು ಜಿಪಂ ಕ್ಷೇತ್ರದಲ್ಲಿ ಮಾಜಿ ಜಿಪಂ ಸದಸ್ಯ ಜಿ.ರಾಜಣ್ಣ ತಮ್ಮ ಪತ್ನಿಗೆ ಸೀಟು ಕೊಡಲಿಲ್ಲವೆಂದು ಮುನಿಸಿಕೊಂಡಿದ್ದರು. ರೋಣೂರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಎಲ್.ವಿ.ಗೋವಿಂದ್ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದರು. ಗೌನಿಪಲ್ಲಿ ಕ್ಷೇತ್ರದಲ್ಲಿ ಪ್ರಾರಂಭದಲ್ಲಿಯೇ ಅಭ್ಯರ್ಥಿಯ ಗೊಂದಲ ಉಂಟಾಗಿತ್ತು. ಶಾಸಕರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಟಿಕೆಟ್ ಬಯಸಿದ್ದ ಮಾಜಿ ಜಿಪಂ ಸದಸ್ಯ ಆರ್.ನಾರಾಯಣಸ್ವಾಮಿ ಬದಲಾದ ಪರಿಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾದರು. ಕೊನೆ ಗಳಿಗೆಯಲ್ಲಿ ಜೆಡಿಎಸ್ ಟಿಕೆಟ್‌ನಿಂದ ವಂಚಿತರಾದ ನಾರಾಯಣಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಈ ಗೊಂದಲಗಳ ನಡುವೆಯೂ ಜೆಡಿಎಸ್ ಅತ್ಯುತ್ತಮ ಸಾಧನೆ ಮಾಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಅಭ್ಯರ್ಥಿಗಳ ಆಯ್ಕೆ ಸುಗಮವಾಗಿ ನಡೆದಿತ್ತು.

ಜಿ.ಕೆ.ವೆಂಕಟಶಿವಾರೆಡ್ಡಿ ಜೆಡಿಎಸ್ ಶಾಸಕರಾಗಿರುವುದರಿಂದ ಸಹಜವಾಗಿಯೇ ಮತದಾರರು ಜೆಡಿಎಸ್ ಕಡೆಗೆ ವಾಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣವೇನು ಎನ್ನುವುದರ ಬಗ್ಗೆ ಮುಖಂಡರಲ್ಲಿ ಚರ್ಚೆ ಪ್ರಾರಂಭವಾಗಿದೆ.   ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಸಿಪಿಐ (ಎಂ) ಕೆಲವು ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಈ ಪಕ್ಷದ ಮುಖಂಡರೇ ಸ್ಪರ್ಧಿಸಿದ್ದುದು ಒಂದು ವಿಶೇಷ. ಆದರೆ ಈ ಎರಡೂ ಪಕ್ಷಗಳಿಂದಲೂ ತಾಲ್ಲೂಕಿನಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT